ಬಾಬಾ ರಾಮದೇವ್ ಅವರು ಗಾಂಧಿ, ಜೆಪಿ ಇದ್ದಂತೆ!
ನವದೆಹಲಿ, ಮೇ 19: ಅಮೃತಸರ ಕ್ಷೇತ್ರದಿಂದ ಪರಾಜಯ ಅನುಭವಿಸಿರುವ ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಯೋಗ ಗುರು ಬಾಬಾ ರಾಮದೇವ್ ಅವರನ್ನು ಮಹಾತ್ಮ ಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಅವರುಗಳಿಗೆ ಹೋಲಿಸಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರನ್ನು ಜಾಗೃತಗೊಳಿಸಿದ ಕೀರ್ತಿಯು ಬಾಬಾ ರಾಮದೇವ್ ಅವರಿಗೆ ಸಲ್ಲುತ್ತದೆ ಎಂದು ಅರುಣ್ ಜೇಟ್ಲಿ ವಿಶ್ಲೇಷಿಸಿದ್ದಾರೆ.

ಯೋಗ ಗುರು ಬಾಬಾ ರಾಮದೇವ್ ಅವರ ಅಭಿಮಾನಿಗಳು ನಿನ್ನೆ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅರುಣ್ ಜೇಟ್ಲಿ ಅವರು ಲೋಕಸಭಾ ಚುನಾವಣೆ ವೇಳೆ ದೇಶದ ಮತದಾರರನ್ನು ರಾಮದೇವ್ ಅವರು ಜಾಗೃತಗೊಳಿಸಿದ್ದನ್ನು ನೋಡಿದರೆ ಮಹಾತ್ಮ ಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಅವರುಗಳು ಜ್ಞಾಪಕಕ್ಕೆ ಬರುತ್ತಾರೆ.
ಬಾಬಾ ಅಷ್ಟು ದೊಡ್ಡ ಪ್ರಮಾಣದಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಅವರಿಗೆ ಯಾವುದೇ ಅಧಿಕಾರದ ಮೇಲೆ ಆಸೆಯಿಲ್ಲ. ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬುದಷ್ಟೇ ಅವರ ಧ್ಯೇಯೋದ್ದೇಶ ಎಂದು ಜೇಟ್ಲಿ ಮೆಚ್ಚುಗೆ ಸೂಚಿಸಿದ್ದಾರೆ.
ಕಾಳ ಧನ ಮತ್ತು ಭ್ರಷ್ಟಾಚಾರದ ವಿರುದ್ಧವೂ ಬಾಬಾ ಹೀಗೆಯೇ ಮಹಾತ್ಮ ಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಅವರಂತೆ ಹೋರಾಡಿದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬಹಿರಂಗವಾಗಿ ಬೆಂಬಲಿಸಿದ ಬಾಬಾ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಿಂದ ನಿರ್ಗಮಿಸುವವರೆಗೂ ಹರಿದ್ವಾರದಲ್ಲಿರುವ ತಮ್ಮ ಆಶ್ರಮಕ್ಕೆ ವಾಪಸಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.
ಬಿಜೆಪಿ ಇದೀಗ ಭರ್ಜರಿಯಾಗಿ ಜಯ ಸಾಧಿಸಿದೆ. ಕಾಂಗ್ರೆಸ್ ಇನ್ನು ಅಧಿಕಾರದಲ್ಲಿ ಮುಂದುವರಿಯುವ ಮಾತೇ ಇಲ್ಲ ಎಂದು ಜೇಟ್ಲಿ ಹರ್ಷ ವ್ಯಕ್ತಡಿಸಿದರು. ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ನೂತನ ಸಂಸದರು ಸಮಾರಂಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications