ದೆಹಲಿಯಲ್ಲಿ ಜ.1ರವರೆಗೆ ಪಟಾಕಿ ನಿಷೇಧಿಸಿದ ಕೇಜ್ರಿವಾಲ್ ಸರ್ಕಾರ
ನವದೆಹಲಿ ಸೆಪ್ಟೆಂಬರ್ 07: ದೇಶದ ರಾಜಧಾನಿಯನ್ನು ಮಾಲಿನ್ಯದಿಂದ ರಕ್ಷಿಸಲು ದೆಹಲಿ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಪಟಾಕಿಯನ್ನು ನಿಷೇಧಿಸಿದೆ. ಈ ಬಗ್ಗೆ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಈ ಮಾಹಿತಿ ನೀಡಿದ್ದಾರೆ. ದೆಹಲಿಯ ಜನತೆಯನ್ನು ಮಾಲಿನ್ಯದ ಭೀತಿಯಿಂದ ಪಾರು ಮಾಡಲು ಕಳೆದ ವರ್ಷದಂತೆ ಈ ಬಾರಿಯೂ ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗುತ್ತಿದ್ದು, ಇದರಿಂದ ಜನರ ಪ್ರಾಣ ಉಳಿಸಬಹುದಾಗಿದೆ ಎಂದಿದ್ದಾರೆ.
ಈ ಬಾರಿ ದೆಹಲಿಯಲ್ಲಿ ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ/ವಿತರಣೆಗೂ ನಿಷೇಧ ಹೇರಲಿದೆ. ಈ ನಿರ್ಬಂಧ ಜನವರಿ 1, 2023ರವರೆಗೆ ಜಾರಿಯಲ್ಲಿರುತ್ತದೆ. ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ದೆಹಲಿ ಪೊಲೀಸ್, ಡಿಪಿಸಿಸಿ ಮತ್ತು ಕಂದಾಯ ಇಲಾಖೆಯೊಂದಿಗೆ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು ಎಂದಿದ್ದಾರೆ.
ಮಂಗಳವಾರ ದೆಹಲಿ ಸರ್ಕಾರದ ಚಳಿಗಾಲದ ಕ್ರಿಯಾ ಯೋಜನೆ ಕುರಿತು ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಗೋಪಾಲ್ ರೈ ಅವರು ಚಳಿಗಾಲದ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳೊಂದಿಗೆ ಸಭೆ ನಡೆಸಿದರು.

ಈ ಸಭೆಯಲ್ಲಿ 15 ಅಂಶಗಳ ಮೇಲೆ ಸರ್ಕಾರದ ಪ್ರಮುಖ ಗಮನ ಹರಿಸಲಾಗಿದ್ದು, ಇದಕ್ಕಾಗಿ ಸುಮಾರು 30 ಇಲಾಖೆಗಳಿಗೆ ವಿಸ್ತೃತ ಯೋಜನೆ ಸಿದ್ಧಪಡಿಸಲು ತಿಳಿಸಲಾಗಿದೆ. ಸೆಪ್ಟೆಂಬರ್ 15ರೊಳಗೆ ವಿಸ್ತೃತ ವರದಿ ಸಲ್ಲಿಸುವಂತೆ ಪರಿಸರ ಇಲಾಖೆಗೆ ಸೂಚಿಸಲಾಗಿದೆ.

ಇಷ್ಟು ಮಾತ್ರವಲ್ಲದೆ ಹೊಲಗದ್ದೆಗಳನ್ನು ಸುಡುವುದರಿಂದ ಆಗುವ ಮಾಲಿನ್ಯವನ್ನು ಪರಿಶೀಲಿಸಲು ಅಭಿವೃದ್ಧಿ ಮತ್ತು ಕಂದಾಯ ಇಲಾಖೆಯನ್ನು ನೋಡಲ್ ಏಜೆನ್ಸಿಯನ್ನಾಗಿ ಮಾಡಲಾಗಿದೆ. ಅಲ್ಲದೆ PWD, MCD, DCB, NDMC, DDA, CPWD, I&FC, ದೆಹಲಿ ಮೆಟ್ರೋ, ಕಂದಾಯ ಇಲಾಖೆ, ದೆಹಲಿ ಜಲ ಮಂಡಳಿಯನ್ನು ಧೂಳಿನ ಮಾಲಿನ್ಯವನ್ನು ಪರಿಶೀಲಿಸಲು ನೋಡಲ್ ಏಜೆನ್ಸಿಗಳಾಗಿ ನೇಮಿಸಲಾಗಿದೆ. ಅದೇ ಸಮಯದಲ್ಲಿ, ದೆಹಲಿ ಟ್ರಾಫಿಕ್ ಪೊಲೀಸ್, ಸಾರಿಗೆ ಇಲಾಖೆ, ಡಿಐಎಂಟಿಎಸ್, ಡಿಟಿಸಿ, ದೆಹಲಿ ಮೆಟ್ರೋ, ಜಿಎಡಿಗೆ ವಾಹನ ಮಾಲಿನ್ಯವನ್ನು ತಡೆಗಟ್ಟುವ ಜವಾಬ್ದಾರಿಯನ್ನು ವಹಿಸಲಾಗಿದೆ.












Click it and Unblock the Notifications