'ಇವಿಎಂ ಮೇಲೆ ಕಣ್ಣಿಡಿ, ಮೋದಿ ಭಾರತದಲ್ಲಿ ಅವಕ್ಕೆ ನಿಗೂಢ ಶಕ್ತಿಯಿದೆ'
ನವದೆಹಲಿ, ಡಿಸೆಂಬರ್ 7: ತೆಲಂಗಾಣ ಹಾಗೂ ರಾಜಸ್ತಾನದಲ್ಲಿ ಶುಕ್ರವಾರ ಮತದಾನ ಪೂರ್ಣಗೊಂಡಿದ್ದು, ಆ ಮೂಲಕ ಐದೂ ರಾಜ್ಯಗಳ ಚುನಾವಣೆ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವಿದ್ಯುನ್ಮಾನ ಮತ ಯಂತ್ರಗಳ ಬಗ್ಗೆ ಎಚ್ಚರವಾಗಿರಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಮತದಾನ ಮುಗಿದಿದೆ. ಕಾಂಗ್ರೆಸ್ ಕಾರ್ಯಕರ್ತರೇ ಜಾಗ್ರತೆ. ಚುನಾವಣೆ ನಂತರ ಮಧ್ಯಪ್ರದೇಶದಲ್ಲಿ ಮತಯಂತ್ರಗಳು ವಿಚಿತ್ರವಾದವು: ಕೆಲವು ಬಸ್ ಅಪಹರಿಸಿದರು ಮತ್ತು ಎರಡು ದಿನ ನಾಪತ್ತೆಯಾಗಿತ್ತು! ಬೇರೆಯವು ಕೈ ತಪ್ಪಿದ್ದವು, ಹೋಟೆಲ್ ನಲ್ಲಿ ನೀರು ಕುಡಿಯುವಾಗ ಕಂಡುಬಂದಿದ್ದವು. ಮೋದಿಯವರ ಭಾರತದಲ್ಲಿ ಇವಿಎಂಗಳಿಗೆ ನಿಗೂಢವಾದ ಶಕ್ತಿ ಇದೆ. ಆದ್ದರಿಂದ ಜಾಗ್ರತೆಯಿಂದ ಇರಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಈಚೆಗೆ ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ವಿಧಾನಸಭೆ ಚುನಾವಣೆ ಮುಗಿದ ಮೇಲೆ ಇವಿಎಂಗೆ ಸಂಬಂಧಿಸಿದ ಕೆಲ ವಿವಾದಗಳು ಕಾಣಿಸಿಕೊಂಡಿದ್ದವು. ಕಾಂಗ್ರೆಸ್ ಸಂಸದ ವಿವೇಕ್ ಟಂಕಾ ಅವರು ಚುನಾವಣಾ ಆಯೋಗಕ್ಕೆ ದೂರು ಕೂಡ ನೀಡಿದ್ದರು. ಕೆಲವು ಕಾಯ್ದಿರಿಸಿದ ಮತಯಂತ್ರಗಳನ್ನು ಎರಡು ದಿನದ ನಂತರ ನೋಂದಣಿ ಆಗದ ಶಾಲಾ ಬಸ್ ನಲ್ಲಿ ಸಾಗರ್ ಜಿಲ್ಲೆಯ ಕಲೆಕ್ಟರ್ ಕಚೇರಿಗೆ ತರಲಾಗಿತ್ತು.

ಇನ್ನು ಭೋಪಾಲ್ ನಲ್ಲಿ ಇವಿಎಂಗಳನ್ನು ಇರಿಸಿದ್ದ ಸ್ಟ್ರಾಂಗ್ ರೂಮ್ ಅಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳು ವಿದ್ಯುತ್ ವ್ಯತ್ಯಯದಿಂದಾಗಿ ಕೆಲ ಗಂಟೆಗಳ ಕಾಲ ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. ಇವೆಲ್ಲ ಮತದಾನವನ್ನು ತಮಗೆ ಬೇಕಾದಂತೆ ತಿರುಚಿಕೊಳ್ಳಲು ಮಾಡಿದ ಪ್ರಯತ್ನ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದವು.












Click it and Unblock the Notifications