Breaking: ತಿಹಾರ್ ಜೈಲಿನಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ಉಪವಾಸ ಸತ್ಯಾಗ್ರಹ
ನವದೆಹಲಿ, ಜುಲೈ 23: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಮತ್ತು ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಅಧ್ಯಕ್ಷ ಯಾಸಿನ್ ಮಲಿಕ್ ಈಗ ಹೊಸ ಡ್ರಾಮಾ ಶುರುವಿಟ್ಟುಕೊಂಡಿದ್ದಾನೆ.
ದೆಹಲಿಯ ತಿಹಾರ್ ಜೈಲಿನ ಕೊಠಡಿ ಸಂಖ್ಯೆ 7ರಲ್ಲಿ ಇರುವ ಯಾಸಿನ್ ಮಲಿಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ವಿರುದ್ಧದ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿಲ್ಲ ಎಂದು ಆತ ದೂಷಿಸುತ್ತಿದ್ದಾನೆ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ.
ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಯಾಸಿನ್ ಮಲಿಕ್ ಜುಲೈ 22ರ ಗುರುವಾರದಿಂದ ಜೈಲಿನಲ್ಲೇ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾನೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಿಹಾರ್ ಕಾರಾಗೃಹದ ಜೈಲು ಸಂಖ್ಯೆ 7ರಲ್ಲಿ ಯಾಸಿನ್ ಮಲಿಕ್:
ಕಾಶ್ಮೀರಿ ಪ್ರತ್ಯೇಕವಾದಿ ಯಾಸಿನ್ ಮಲಿಕ್ ಅನ್ನು ತಿಹಾರ್ ಕಾರಾಗೃಹದ ಜೈಲು ಸಂಖ್ಯೆ 7ರ ವಾರ್ಡ್‌ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಯಾಸಿನ್ ಮಲಿಕ್ ಅನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಿದ್ದ ಬಗ್ಗೆ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕೋರ್ಟ್ ಶಿಕ್ಷೆ ಅವಧಿ ಪ್ರಕಟಿಸಿದ ನಂತರದಲ್ಲಿ ಅವನನ್ನು ಬೇರೆ ವಾರ್ಡ್‌ಗೆ ಅಥವಾ ಜೈಲಿಗೆ ಸ್ಥಳಾಂತರಿಸಬೇಕೆ ಎಂದು ನಿರ್ಧರಿಸಲಾಗಿಲ್ಲ ಎಂದು ಅವರು ಹೇಳಿದರು.
ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್:
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಯಾಸಿನ್ ಮಲಿಕ್‌ಗೆ ಐಪಿಸಿಯ ಸೆಕ್ಷನ್ 121ರ ಭಾರತದ ವಿರುದ್ಧ ಯುದ್ಧ ಮಾಡುವುದು ಮತ್ತು ಯುಎಪಿಎ ಸೆಕ್ಷನ್ 17ರ ಭಯೋತ್ಪಾದನಾ ಕೃತ್ಯಕ್ಕೆ ನಿಧಿ ಸಂಗ್ರಹಿಸುವುದರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ನ್ಯಾಯಾಲಯವು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥನಿಗೆ 10 ಲಕ್ಷ ರೂಪಾಯಿಗೂ ಹೆಚ್ಚು ದಂಡವನ್ನು ವಿಧಿಸಿದೆ.
"ಯಾಸಿನ್ ಮಲಿಕ್‌ಗೆ ಎರಡು ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ, ಜೊತೆಗೆ 10 ಅಪರಾಧಗಳಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ, ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ನಡೆಯುತ್ತವೆ," ಎಂದು ವಕೀಲ ಉಮೇಶ್ ಶರ್ಮಾ ತಿಳಿಸಿದ್ದರು.
ನನ್ನದೇ ತಪ್ಪು ಎಂದು ಒಪ್ಪಿಕೊಂಡಿದ್ದ ಯಾಸಿನ್ ಮಲಿಕ್ ಹಿನ್ನೆಲೆ ಏನು?:
ಸೆಕ್ಷನ್ 16ರ ಭಯೋತ್ಪಾದನಾ ಕೃತ್ಯ, 17ರ ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸುವುದು, 18ರ ಅಡಿ ಭಯೋತ್ಪಾದಕ ಕೃತ್ಯಕ್ಕೆ ಪಿತೂರಿ ನಡೆಸುವುದು ಮತ್ತು 20ರ ಪ್ರಕಾರ ಭಯೋತ್ಪಾದಕ ಕೃತ್ಯಕ್ಕೆ ಪಿತೂರಿ ನಡೆಸುವುದು. ಇದರ ಜೊತೆಗೆ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ 120-ಬಿರ ಕ್ರಿಮಿನಲ್ ಪಿತೂರಿ ಮತ್ತು 124-ಎ ದೇಶದ್ರೋಹದ ಗ್ಯಾಂಗ್ ಅಥವಾ ಸಂಸ್ಥೆ ಕಟ್ಟಿರುವುದು ಸೇರಿದಂತೆ ತನ್ನ ವಿರುದ್ಧ ಹೊರಿಸಲಾದ ಆರೋಪಗಳನ್ನು ತಾನು ವಿರೋಧಿಸುವುದಿಲ್ಲ ಎಂದು ಮಲಿಕ್ ನ್ಯಾಯಾಲಯಕ್ಕೆ ತಿಳಿಸಿದ್ದನು.
ಈ ಭಯೋತ್ಪಾದಕ ನಿಧಿಯ ಹರಿವಿನ ಪ್ರಮುಖ ಮಾರ್ಗಗಳಲ್ಲಿ ಆರೋಪಿ ಜಹೂರ್ ಅಹ್ಮದ್ ಶಾ ವತಾಲಿ ಒಬ್ಬನಾಗಿದ್ದಾನೆ. ಈ ನಿಧಿ ಸಂಗ್ರಹಣೆ ಹಾದಿಯನ್ನು ಆರೋಪಿ ನವಲ್ ಕಿಶೋರ್ ಕಪೂರ್ ಸುಗಮಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾನೆ ಎಂದುಹೇಳಲಾಗಿದೆ. ರಾಷ್ಟ್ರೀಯ ತನಿಖಾ ತಂಡ (NIA)ದ ಪ್ರಕಾರ ಲಷ್ಕರ್-ಎ-ತೈಬಾ (LeT), ಹಿಜ್ಬುಲ್-ಮುಜಾಹಿದ್ದೀನ್ (HM), ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF), ಜೈಶ್-ಎ-ಮೊಹಮ್ಮದ್ (JeM) ಮುಂತಾದ ವಿವಿಧ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ಐಎಸ್ಐ ಬೆಂಬಲದ ಮೂಲಕ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಮೇಲೆ ದಾಳಿ ಮಾಡುವ ಮೂಲಕ ಕಣಿವೆಯಲ್ಲಿ ಹಿಂಸಾಚಾರವನ್ನು ನಡೆಸಿದೆ.












Click it and Unblock the Notifications