ಪಕ್ಷೇತರ ಶಾಸಕರ ವಕೀಲರ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿ
ನವದೆಹಲಿ, ಜುಲೈ 25: ಸೋಮವಾರವೇ ವಿಶ್ವಾಸಮತ ಯಾಚನೆ ಮಾಡುವಂತೆ ಕೋರಿ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದುಕೊಳ್ಳಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ಪಕ್ಷೇತರ ಶಾಸಕರಾದ ಆರ್. ಶಂಕರ್ ಮತ್ತು ನಾಗೇಶ್ ಅವರು, ಸಮ್ಮಿಶ್ರ ಸರ್ಕಾರವು ಮಾತು ನೀಡಿದಂತೆ ಸೋಮವಾರವೇ ವಿಶ್ವಾಸಮತ ಯಾಚನೆ ನಡೆಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಸೋಮವಾರ ಈ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತ್ತು.
ಯಾವುದೇ ಕಾರಣಕ್ಕೂ ಮಂಗಳವಾರ ವಿಶ್ವಾಸಮತ ಯಾಚನೆ ಮುಗಿಸುವುದಾಗಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದರಿಂದ ಸುಪ್ರೀಂಕೋರ್ಟ್, ಅವರು ಭರವಸೆ ಕೊಟ್ಟಿದ್ದಾರೆ. ಹಾಗಾಗಿ ಒಂದು ದಿನ ಕಾಯಬಹುದು ಎಂದು ಪುನಃ ವಿಚಾರಣೆಯನ್ನು ಮುಂದೂಡಿತ್ತು. ಮಂಗಳವಾರ ವಿಶ್ವಾಸಮತ ಯಾಚನೆ ನಡೆದಿದ್ದರಿಂದ ಪಕ್ಷೇತರ ಶಾಸಕರು ಅರ್ಜಿಯನ್ನು ಹಿಂದಕ್ಕೆ ಪಡೆದುಕೊಳ್ಳಲು ಬಯಸಿದ್ದರು.

ಬುಧವಾರದಂದು ಅರ್ಜಿ ವಿಚಾರಣೆಗೆ ಬಂದಾಗ ಪಕ್ಷೇತರ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ಹಾಜರಿರಲಿಲ್ಲ. ಇದರ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. 'ನಿಮಗೆ ಬೇಕಾದಾಗ ಮಧ್ಯರಾತ್ರಿ ಕೂಡ ವಿಚಾರಣೆ ನಡೆಸಿ ನಾವು ಆದೇಶ ನೀಡಬೇಕಾಗುತ್ತದೆ. ಆದರೆ ನಾವು ಕರೆದಾಗ ನೀವು ಬರುವುದಿಲ್ಲ' ಎಂದು ತರಾಟೆಗೆ ತೆಗೆದುಕೊಂಡಿತು. ಬಳಿಕ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಸಮ್ಮತಿ ಸೂಚಿಸಿತು.












Click it and Unblock the Notifications