Breaking: ಹಿಜಾಬ್ ವಿವಾದ: ಸೂಕ್ತ ಸಮಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದ ಸಿಜೆಐ
ನವದೆಹಲಿ, ಫೆಬ್ರವರಿ 11: ರಾಜ್ಯದಲ್ಲಿ ಏನಾಗುತ್ತಿದೆ ಎಂದು ನಮಗೂ ತಿಳಿದಿದೆ, ಹಿಜಾಬ್ ವಿಚಾರ ಕುರಿತು ಸೂಕ್ತ ಸಮಯದಲ್ಲಿ ವಿಚಾರಣೆ ಮಾಡಲಾಗುವುದು ಎಂದು ಸಿಜೆಐ ಎನ್‌ವಿ ರಮಣ ತಿಳಿಸಿದ್ದಾರೆ.

ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತುರ್ತು ವಿಚಾರಣೆಗೆ ಕೋರಲಾಗಿತ್ತು. ಈ ಕುರಿತು ಸಿಜೆಐ ಎನ್‌ವಿ ರಮಣ ಮಾತನಾಡಿ, ನಮಗೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಅರಿವಿದೆ ಸೂಕ್ತ ಸಮಯದಲ್ಲಿ ಅರ್ಜಿ ವಿಚಾರಣೆ ನಡೆಸಲಾಗುವುದು, ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಕ್ಕೆ ಕುರಿತು ನಿರ್ಧಾರ ತೆಗೆದುಕೊಳ್ಳುವವರೆಗೆ ಧಾರ್ಮಿಕ ಉಡುಪು ಧರಿಸುವುದನ್ನು ತಪ್ಪಿಸುವಂತೆ ಹೈಕೋರ್ಟ್ ನಿನ್ನೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿತ್ತು. ಬಳಿಕ ಬಾಲಕಿಯೊಬ್ಬಳು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದಳು.
ಈ ವಿಷಯವನ್ನು ರಾಷ್ಟ್ರಮಟ್ಟಕ್ಕೆ ಹಬ್ಬಿಸಬೇಡಿ, ಸೂಕ್ತ ಸಮಯದಲ್ಲಿ ನಾವು ಮಧ್ಯಪ್ರವೇಶಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದ್ದಾರೆ. ರಾಜ್ಯದಲ್ಲಿ ಏನಾಗುತ್ತಿದೆ ಎಂದು ನಮಗೆ ತಿಳಿದಿದೆ, ದೆಹಲಿಗೆ ಬರುವ ಮುನ್ನ ಸರಿಯಾಗಿ ಯೋಚಿಸಿ, ಏನಾದರೂ ತಪ್ಪಿದ್ದರೆ ನಾವು ರಕ್ಷಣೆ ಮಾಡುತ್ತೇವೆ ಎಂದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಕಾಮತ್, ಸೋಮವಾರದಿಂದ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ವಿದ್ಯಾರ್ಥಿಗಳು ಧಾರ್ಮಿಕ ಡ್ರೆಸ್ ಧರಿಸದಂತೆ ಹೈಕೋರ್ಟ್ ಮೌಖಿಕ ಆದೇಶ ನೀಡಿದೆ.
ಧಾರ್ಮಿಕ ನಂಬಿಕೆಗೆ ಸಂಬಂಧಿಸಿದಂತೆ ದೂರಗಾಮಿ ಪರಿಣಾಮ. ಸಂವಿಧಾನದ ನೀಡಿರುವ ಸಾಂವಿಧಾನಿಕ ಹಕ್ಕುಗಳನ್ನ ಸಂರಕ್ಷಿಸಬೇಕಿದೆ. ಹೀಗಾಗಿ ತುರ್ತು ವಿಚಾರಣೆ ನಡೆಸುವಂತೆ ಕಾಮತ್ ಮನವಿ ಮಾಡಿದರು.
ತುರ್ತು ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ ಸಿಜೆಐ, ಯಾವುದಾದರೂ ಪರೀಕ್ಷೆಗೆ ತೊಂದರೆಯಾಗುವುದಾದರೇ ಸೂಕ್ತ ಸಂದರ್ಭದಲ್ಲಿ ವಿಚಾರಣೆ ನಡೆಸುತ್ತೇವೆ. ವಿವಾದವನ್ನ ರಾಷ್ಟ್ರೀಯ ವಿವಾದವಾಗಿಸಬೇಡಿ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಡಿ.
ಹೈಕೋರ್ಟ್ ಆದೇಶ ಗೊತ್ತಿಲ್ಲ. ಪರೀಕ್ಷೆಗೆ ತೊಂದರೆಯಾದರೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಮಗೆ ಎಲ್ಲರ ಹಕ್ಕು ಸಂರಕ್ಷಿಸಬೇಕಿದೆ. ಸೂಕ್ತ ಸಮಯದಲ್ಲಿ ಮಧ್ಯ ಪ್ರವೇಶಿಸುತ್ತೇವೆ ಎಂದು ಹೇಳಿದರು












Click it and Unblock the Notifications