ಮೇಕೆದಾಟು ಯೋಜನೆ ವಿರುದ್ಧ ಸುಪ್ರೀಂಗೆ ಜಯಲಲಿತಾ

ಮಂಗಳವಾರ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ತಮಿಳುನಾಡು ಸರ್ಕಾರ, ಕರ್ನಾಟಕ ಸರ್ಕಾರವೂ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಕೆದಾಟು ಬಳಿ ಜಲಾಶಯ ನಿರ್ಮಿಸಿ, ಜಲವಿದ್ಯುತ್ ಕೇಂದ್ರ ಸ್ಥಾಪಿಸುವ ಹಾಗೂ ಹೇಮಾವತಿ ನಾಲೆಗಳನ್ನು ಆಧುನೀಕರಣಗೊಳಿಸುವ ಕಾಮಗಾರಿ ಆರಂಭಿಸಲು ಯೋಜನೆ ಸಿದ್ದಪಡಿಸಿದೆ ಎಂದು ದೂರಿದೆ.
ಕಾವೇರಿ ಐತೀರ್ಪಿನಲ್ಲಿ ಮೇಕೆದಾಟು ಯೋಜನೆಯ ಪ್ರಸ್ತಾಪವೇ ಇಲ್ಲ. ಆದರೂ ಕರ್ನಾಟಕ ಸರ್ಕಾರ ಈ ಯೋಜನೆ ಕೈಗೊಳ್ಳಲು ಮುಂದಾಗುತ್ತಿರುವುದರಿಂದ ಕಾವೇರಿ ನದಿಯ ಹರಿವಿಗೆ ತೊಡಕಾಗಲಿದೆ. ತಮಿಳುನಾಡಿನಲ್ಲಿ ನೀರಾವರಿಗೆ ತೊಂದರೆಯಾಗಲಿದೆ ಎಂದು ಅರ್ಜಿಯಲ್ಲಿ ತಮಿಳುನಾಡು ಸರ್ಕಾರ ವಾದಿಸಿದೆ. ಆದ್ದರಿಂದ ಕರ್ನಾಟಕದ ಈ ಯೋಜನೆಗಳಿಗೆ ತಡೆ ನೀಡಬೇಕೆಂದು ಮನವಿ ಮಾಡಿದೆ.
ಕರ್ನಾಟಕ ಸರ್ಕಾರ ಹೇಮಾವತಿ ನಾಲೆಗಳನ್ನು ಆಧುನೀಕರಣ ಮಾಡಲು ಉದ್ದೇಶಿಸಿರುವುದರಿಂದ ರಾಜ್ಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲಿದೆ. ಕಾವೇರಿ ನ್ಯಾಯಾಧಿಕರಣ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಚ್ಚುಕಟ್ಟು ಪ್ರದೇಶವನ್ನು ವಿಸ್ತರಿಸಿಕೊಳ್ಳಲಿದೆ ಎಂದು ಆರೋಪಿಸಿರುವ ತಮಿಳುನಾಡು, ಇದರಿಂದಲೂ ತಮಗೆ ತೊಂದರೆಯಾಗಲಿದೆ ಎಂದು ವಿವರಣೆ ನೀಡಿದೆ. (ಮತ್ತೆ ಕಾವೇರಿ ಕ್ಯಾತೆ ತೆಗೆದ ಜಯಲಲಿತಾ)
ಹೇಮಾವತಿ ಹಾಗೂ ಕೃಷ್ಣರಾಜ ಸಾಗರ ಜಲಾಶಯಗಳಲ್ಲಿನ ಹೆಚ್ಚುವರಿ ನೀರು ಬಳಸಿಕೊಂಡು 500 ರಿಂದ 600 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆಯನ್ನು ಕರ್ನಾಟಕ ಜಾರಿಗೆ ತರುತ್ತಿದೆ ಎಂದು ತಮಿಳುನಾಡು ದೂರಿದೆ. ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನಂತೆ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕು. ಆದರೆ ಅದು ವಿಳಂಬ ಮಾಡುತ್ತಿದೆ. ತಕ್ಷಣ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದೆ.
ಸೆಪ್ಟೆಂಬರ್ ನಲ್ಲಿಯೂ ಮೇಕೆದಾಟು ಯೋಜನೆ ಸ್ಥಗಿತಗೊಳಿಸಲು ಕರ್ನಾಟಕಕ್ಕೆ ಸೂಚನೆ ನೀಡಬೇಕೆಂದು ಜಯಲಲಿತಾ ಪ್ರಧಾನಿಗೆ ಪತ್ರ ಬರೆದಿದ್ದರು. ಯೋಜನೆಯನ್ನು ಸಮರ್ಥಿಸಿಕೊಂಡಿದ್ದ ಕರ್ನಾಟಕ, ಮೇಕೆದಾಟು ಯೋಜನೆ ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿತ್ತು. ಸದ್ಯ ಪುನಃ ಮೇಕೆದಾಟು ಯೋಜನೆ ಮತ್ತು ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. (ಮೇಕೆದಾಟು ಜಲ ವಿದ್ಯುತ್ ಯೋಜನೆ ಸ್ಥಗಿತವಿಲ್ಲ)












Click it and Unblock the Notifications