ಹಿಂಸಾಚಾರ ಪೀಡಿತ ಜಹಾಂಗೀರ್ಪುರಿಯಲ್ಲಿ ಧ್ವಂಸ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಡೆ
ದೆಹಲಿ, ಏಪ್ರಿಲ್ 20: ಹನುಮ ಜಯಂತಿಯ ಸಂದರ್ಭದಲ್ಲಿ ಹಿಂಸಾಚಾರದಿಂದ ತತ್ತರಿಸಿರುವ ವಾಯುವ್ಯ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಧ್ವಂಸ ಕಾರ್ಯಾಚರಣೆಯನ್ನು ನಿಲ್ಲಿಸಿ ಸುಪ್ರೀಂ ಕೋರ್ಟ್ ಬುಧವಾರ ಯಥಾಸ್ಥಿತಿಗೆ ಆದೇಶಿಸಿದೆ.
ಬಿಜೆಪಿ ಆಡಳಿತವಿರುವ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಬುಧವಾರ ಮತ್ತು ಗುರುವಾರ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಅಭಿಯಾನವನ್ನು ನಿಗದಿಪಡಿಸಿದೆ. ಮುನ್ಸಿಪಲ್ ಕಾರ್ಪೊರೇಷನ್ ದೆಹಲಿ ಪೊಲೀಸರಿಂದ 400 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ಕೋರಿತ್ತು. ಆದರೆ ಇದಕ್ಕೆ ಕೋರ್ಟ್ ತಡೆ ಆದೇಶವನ್ನು ನೀಡಿದೆ.
ಹಿರಿಯ ವಕೀಲರಾದ ದುಷ್ಯಂತ್ ದವೆ, ಕಪಿಲ್ ಸಿಬಲ್, ಪಿ.ವಿ ಸುರೇಂದ್ರನಾಥ್ ಮತ್ತು ಪ್ರಶಾಂತ್ ಭೂಷಣ್ ಅವರು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರ ಮುಂದೆ ವಿಷಯ ಪ್ರಸ್ತಾಪಿಸಿದರು. ಗಲಭೆ ಪೀಡಿತ ಜಹಾಂಗೀರ್‌ಪುರಿಯಲ್ಲಿ ಧ್ವಂಸಗೊಳಿಸುವ ಕಾರ್ಯಾಚರಣೆಯು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಮತ್ತು ಯಾರಿಗೂ ನೋಟಿಸ್ ನೀಡಿಲ್ಲ ಎಂದು ದುಶ್ಯಂತ್ ದವೆ ಉಲ್ಲೇಖಿಸಿದ್ದರಿಂದ ಧ್ವಂಸ ಕಾರ್ಯಾಚರಣೆಯನ್ನು ನಿಲ್ಲಿಸಿ ಯಥಾಸ್ಥಿತಿಗೆ ಆದೇಶಿಸಲಾಗಿದೆ. ಜೊತೆಗೆ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ ಎಂದು ನ್ಯಾಯಮೂರ್ತಿ ರಮಣ ಹೇಳಿದರು.

ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದ ಗಲಭೆ-ಆರೋಪಿಗಳ ಆಸ್ತಿಗಳನ್ನು ಧ್ವಂಸಗೊಳಿಸಲು ಬುಲ್ಡೋಜರ್‌ಗಳನ್ನು ಬಳಸುವುದರ ವಿರುದ್ಧ ಜಮೀಯತ್ ಉಲಾಮಾ-ಇ-ಹಿಂದ್ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಯಿತು. ಜೊತೆಗೆ ಖಾರ್ಗೋನ್‌ನಂತೆ ಜಹಾಂಗೀರ್‌ಪುರಿ ಧ್ವಂಸ ಅಭಿಯಾನದ ವಿಷಯವನ್ನು ಕೋರ್ಟ್ ನಲ್ಲಿ ವಕೀಲರು ಉಲ್ಲೇಖಿಸಿದ್ದಾರೆ. ಮುಖ್ಯ ನ್ಯಾಯಾಧೀಶರ ಮುಂದೆ ಇಂತಹ ಹಿಂಸಾಚಾರದ ಪಟ್ಟಿಯನ್ನು ಇಡಲಾಗಿದೆ.
ಜಹಾಂಗೀರ್‌ಪುರಿ ಧ್ವಂಸ ಪ್ರಕರಣವನ್ನು ದೆಹಲಿ ಹೈಕೋರ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ನಿವಾಸಿಗಳಿಗೆ ಪೂರ್ವ ಸೂಚನೆ ನೀಡಲಾಗಿಲ್ಲ ಮತ್ತು ಅವರಲ್ಲಿ ಹಲವರು ಮನೆಯಲ್ಲಿಯೂ ಇಲ್ಲ ಎಂದು ವಕೀಲರು ಹೇಳಿದ್ದಾರೆ.

ದೆಹಲಿ ಹೈಕೋರ್ಟ್‌ನಲ್ಲಿ ವಕೀಲರು ಧ್ವಂಸ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಕೋರಿದ್ದಾರೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರ ಪೀಠವು ಇದಕ್ಕೆ ಅನುಮತಿ ನೀಡಿದೆ. ಜೊತೆಗೆ ಇದರ ಬಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅವರಿಗೆ ಹೆಚ್ಚಿನ ಮಾಹಿತಿಯನ್ನು ಕೇಳಿದೆ. ಇದು ಸಾರ್ವಜನಿಕ ಭೂಮಿಯನ್ನು ಅತಿಕ್ರಮಣವಾಗಿದ್ದರೆ ಇದು ಕಾನೂನುಬಾಹಿರವೇ ಎಂದು ವಿಚಾರಣೆಯ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ಪೀಠವು ಕೇಳಿದೆ.

ಧ್ವಂಸ ಕಾರ್ಯಚರಣೆಗೆ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಸಿದ್ಧತೆ ಮಾಡಿಕೊಂಡಿತ್ತು. ಬುಧವಾರ ಬೆಳಗ್ಗೆ ಜಹಾಂಗೀರಪುರಿಯಲ್ಲಿ ಭಾರೀ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು. ಉಪ ಪೊಲೀಸ್ ಆಯುಕ್ತರಾದ (ಡಿಸಿಪಿ) ಉಷಾ ರಂಗಣ್ಣಿ ಮತ್ತು ಇತರ ಪೊಲೀಸ್ ಸಿಬ್ಬಂದಿ ಬೆಳಗ್ಗೆ ಪ್ರದೇಶವನ್ನು ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಎನ್‌ಡಿಎಂಸಿ ಮೇಯರ್ ರಾಜಾ ಇಕ್ಬಾಲ್ ಸಿಂಗ್, ಸುಪ್ರಿಂ ಕೋರ್ಟ್ ಆದೇಶವನ್ನು ಅನುಸರಿಸಲಾಗುವುದು ಮತ್ತು ಕೆಡವುವ ಕಾರ್ಯ ಆರಂಭವಾದ ಕೂಡಲೇ ಆದೇಶ ಬಂದಿರುವುದರಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications