ಮೋದಿಯನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿದ ಜಗನ್
ನವದೆಹಲಿ, ಮೇ 26: ಎನ್ಡಿಎಯಿಂದ ಪ್ರಧಾನಿಯಾಗಿ ನಿಯೋಜನೆಗೊಂಡಿರುವ ನರೇಂದ್ರ ಮೋದಿ ಅವರನ್ನು ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿಯಾಗಿರುವ ಜಗನ್ ಮೋಹನ್ ರೆಡ್ಡಿ ಅವರು ಇಂದು ಭೇಟಿ ಮಾಡಿದರು. ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಭೇಟಿ ಮಾಡಿದರು. ಮೇ 30ರಂದು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದರು.
ಆಂಧ್ರಪ್ರದೇಶದಲ್ಲಿ ಅಭೂತಪೂರ್ವ ಜಯ ದಾಖಲಿಸಿ, ಅಧಿಕಾರ ಸ್ಥಾಪನೆಗೆ ವೈಎಸ್ಸಾರ್ ಕಾಂಗ್ರೆಸ್ ಪಕ್ಷವು ಮುಂದಾಗಿದೆ. 175 ವಿಧಾನಸಭಾ ಸ್ಥಾನಗಳ ಪೈಕಿ 151 ಸ್ಥಾನಗಳನ್ನು ಜಗನ್ ಮೋಹನ್ ರೆಡ್ಡಿ ಅವರ ಪಕ್ಷವು ಗೆದ್ದುಕೊಂಡಿದೆ. ಅಧಿಕಾರದಲ್ಲಿದ್ದ ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಕ್ಷವು ಕೇವಲ 23 ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ವಿಧಾನಸಭೆ ಅಲ್ಲದೆ ಲೋಕಸಭೆ ಚುನಾವಣೆಯಲ್ಲೂ ವೈಎಸ್ಸಾರ್ ಕಾಂಗ್ರೆಸ್ ಉತ್ತಮ ಫಲಿತಾಂಶ ಹೊರಹಾಕಿದೆ, 25 ರಲ್ಲಿ 22 ಸ್ಥಾನಗಳನ್ನು ಗೆದ್ದುಕೊಂಡಿದೆ. ಟಿಡಿಪಿ ಕೇವಲ 3 ಸ್ಥಾನ ಗಳಿಸಿದೆ.
ಆಂಧ್ರಕ್ಕೆ ವಿಶೇಷ ಸ್ಥಾನಮಾನ: 22 ಅಭ್ಯರ್ಥಿಗಳನ್ನು ಗೆಲ್ಲಿಸಿ ಸಂಸತ್ತಿಗೆ ಕಳಿಸುತ್ತಿದ್ದೇವೆ. ಆಂಧ್ರಕ್ಕೆ ವಿಶೇಷ ಸ್ಥಾನಮಾನ ಪಡೆಯುವ ಬಗ್ಗೆ ಈ ಬಾರಿ ಇನ್ನಷ್ಟು ಗಟ್ಟಿಯಾಗಿ ದನಿಯೆತ್ತಬೇಕಿದೆ. ಈ ಬಗ್ಗೆ ಮೋದಿ ಅವರೊಂದಿಗೆ ಮತ್ತೊಮ್ಮೆ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದರು.
ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲು ಒಪ್ಪದ ಕಾರಣ ಎನ್ಡಿಎ ಜೊತೆ ತೆಲುಗುದೇಶಂ ಮೈತ್ರಿ ಕಳೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಜಯವಾಡದ ಇಂದಿರಾಗಾಂಧಿ ಮುನ್ಸಿಪಲ್ ಕಾರ್ಪೊರೇಷನ್ ಮೈದಾನದಲ್ಲಿ ಮೇ 30ರಂದು ಮಧ್ಯಾಹ್ನ 12.23ರ ವೇಳೆಗೆ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಜಗನ್ ಮೋಹನ್ ರೆಡ್ಡಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.