ಸಂಸದೀಯ ರಾಜಕಾರಣಕ್ಕೆ ವಿದಾಯದ ಸೂಚನೆ ನೀಡಿದ ಸುಷ್ಮಾ, ಸುಮಿತ್ರಾ
ಭಾರತೀಯ ಜನತಾ ಪಕ್ಷದ ಇಬ್ಬರು ಮಹಾನ್ ಮುಖಂಡರಾದ ಸುಷ್ಮಾ ಸ್ವರಾಜ್ ಮತ್ತು ಸುಮಿತ್ರಾ ಮಹಾಜನ್ ಅವರು ಮಾಜಿ-ಸಂಸದರ ಗುರಿತಿನ ಚೀಟಿಗೆ ಅರ್ಜಿ ಹಾಕಿರುವುದು ಅವರ ಸಂಸದೀಯ ರಾಜಕಾರಣಕ್ಕೆ ವಿದಾಯ ಹೇಳುತ್ತಿರುವ ಸೂಚನೆ ಎನ್ನಿಸಿದೆ.
ಅನಾರೋಗ್ಯದ ಕಾರಣ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿದ್ದರೂ, ರಾಜ್ಯ ಸಭೆಯಿಂದಾದರೂ ಸುಮಿತ್ರಾ ಮಹಾಜನ್, ಮತ್ತು ಸುಷ್ಮಾ ಸ್ವರಾಜ್ ಅವರು ಸಂಸತ್ ಪ್ರವೇಶಿಸಬಹುದು ಎಂಬ ಊಹೆ ಇನ್ನೂ ಹಲವು ಅಭಿಮಾನಿಗಳಿಗಿತ್ತು. ಆದರೆ ಅವರು ಮಾಜಿ ಸಂಸದರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿರುವುದು ಅಭಿಮಾನಿಗಳಿಗೆ ಭಾರೀ ನಿರಾಶೆಯನ್ನುಂಟು ಮಾಡಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು 67 ವರ್ಷ ವಯಸ್ಸಿನ ಸುಷ್ಮಾ ಸ್ವರಾಜ್ ಮೊದಲೇ ಘೋಷಿಸಿದ್ದರು. ಆದರೆ ತಾವು ರಾಜಕೀಯದಿಂದ ನಿವೃತ್ತಿ ಪಡೆಯುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದರು.

ಜೊತೆಗೆ ಇಂಧೋರ್ ಸಂಸದೆ(ಮಾಜಿ)ಯಾಗಿದ್ದ 76 ವರ್ಷ ವಯಸ್ಸಿನ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಹ ತಾವು ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಮಂಗಳವಾರ ಸುಮಿತ್ರಾ ಮಹಾಜನ್ ಅವರಿಗೆ ಮಾಜಿ ಸಂಸದರ ಗುರುತಿನ ಚೀಟಿಯನ್ನು ನೀಡಲಾಗಿದೆ ಎಂದು ಅವರ ವಕ್ತಾರ ಪಂಕಜ್ ಕ್ಷೀರಸಾಗರ್ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ತಮ್ಮ ವಿದಾಯದ ಸಭೆಯನ್ನು ಮಹಾಜನ್ ನಡೆಸಿದ್ದು, ಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. "ನೀವು ನನಗೆ ಸ್ಪೀಕರ್ ಆಗುವ ಅವಕಾಶ ಕೊಟ್ಟಿದ್ದೀರಿ. ಧನ್ಯವಾದಗಳಿ ಪ್ರಧಾನಿ ಮೋದಿ" ಎಂದಿದ್ದಾರೆ.
ಆದರೆ ಸುಷ್ಮಾ ಸ್ವರಾಜ್ ಅವರ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಅದು ಪ್ರಗತಿಯಲ್ಲಿದೆ ಎಂದು ತಿಳಿದುಂದಿದೆ. ಈ ಬಗ್ಗೆ ಸ್ವರಾಜ್ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.












Click it and Unblock the Notifications