ಸಂಚಾರಿ ನಿಯಮ ಪಾಲಿಸಿದರೆ ಪೆಟ್ರೋಲ್ ಬಹುಮಾನ..!
ಅಹ್ಮದಾಬಾದ್, ನ. 14: ಸಂಚಾರಿ ನಿಯಮಗಳ ಜಾರಿಗೆ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ, ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಹ್ಮದಾಬಾದ್ ನಗರದ ರಾಮೋಲ್ ಪ್ರದೇಶದ ಪೊಲೀಸರು ಹೊಸತೊಂದು ವಿಧಾನ ಕಂಡುಕೊಂಡಿದ್ದಾರೆ. ಸಾಮ ಮಾರ್ಗ ಪರಿಣಾಮಕಾರಿಯಾಗದ ಕಾರಣ ದಾನಕ್ಕೆ ಮೊರೆ ಹೋಗಿದ್ದಾರೆ.

ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವವರಿಗೆ ಒಂದು ಲೀಟರ್ ಪೆಟ್ರೋಲ್ ಬಹುಮಾನವಾಗಿ ನೀಡುವ ಯೋಜನೆಯನ್ನು ಅಹ್ಮದಾಬಾದ್ ನಗರದ ರಾಮೋಲ್ ಪ್ರದೇಶದ ಪೊಲೀಸರು ಆರಂಭಿಸಿದ್ದಾರೆ. ಅಂತಹ 58 ಜನರಿಗೆ ಈಗಾಗಲೇ ಪೆಟ್ರೋಲನ್ನು ಬಹುಮಾನ ರೂಪದಲ್ಲಿ ನೀಡಲಾಗಿದೆ. [ಬೆಂಗಳೂರಿನಲ್ಲಿ ಎಲ್ನೋಡಿ ಟ್ರಾಫಿಕ್ ಜಾಮ್]
ವಾಹನ ಸವಾರರನ್ನು ತಡೆದು ಅಗತ್ಯ ದಾಖಲೆ ಪತ್ರ ಹಾಗೂ ಹೆಲ್ಮೆಟ್, ಸೀಟ್‌ಬೆಲ್ಟ್ ಕಟ್ಟಿಕೊಂಡಿರುವುದನ್ನು ಪರಿಶೀಲಿಸಿ ಅರ್ಹರಿಗೆ ಬಹುಮಾನ ನೀಡಿದ್ದಾರೆ.
ಈ ಕುರಿತು ಪಿಟಿಐಗೆ ಪ್ರತಿಕ್ರಿಯೆ ನೀಡಿರುವ ಸಂಚಾರಿ ಪೊಲೀಸ್ ನಿರೀಕ್ಷಕ ಸೋಲಂಕಿ, ನಮ್ಮ ಹೊಸ ವಿಧಾನದಿಂದ ಉತ್ತಮ ಪರಿಣಾಮ ಕಂಡುಬಂದಿದೆ. ಜನರಿಂದ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಈ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ, ಇದೇ ನಗರದ ರೇಖಿಯಲ್ ಪೊಲೀಸ್ ಠಾಣೆ ಪೊಲೀಸರು ಸಂಚಾರಿ ನಿಯಮ ಪಾಲಿಸಿದವರನ್ನು ಪ್ರೋತ್ಸಾಹಿಸಲು ವಿವಿಧ ರೆಸ್ಟೋರೆಂಟ್‌ಗಳಲ್ಲಿ ರಿಯಾಯಿತಿ ದರದಲ್ಲಿ ಆಹಾರ ಪಡೆಯಲು ಕೂಪನ್ ವಿತರಿಸಿದ್ದರು.
ಅಹ್ಮದಾಬಾದ್‌ನಲ್ಲಿ ದಾನ ಮಾರ್ಗ ಸಫಲವಾಗಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಅತಿಯಾಗಿ ಎದುರಿಸುತ್ತಿರುವ ಬೆಂಗಳೂರಿನ ಪೊಲೀಸರು ಅನುಸರಿಸುತ್ತಾರೆಯೇ ನೋಡಬೇಕಿದೆ.











Click it and Unblock the Notifications