ಸರ್ಕಾರಕ್ಕೆ ಸವಾಲ್: "ಲಡಾಖ್ ಗಡಿಯಲ್ಲಿ ಮೊಳೆ ಹೊಡೆಯುವ ತಾಕತ್ ಇದೆಯೇ?"
ನವದೆಹಲಿ, ಫೆಬ್ರವರಿ.08: ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ತಡೆಯಲು ರಸ್ತೆಯಲ್ಲಿ ಮೊಳೆ ಬಡಿಯುವುದು, ಸರಪಳಿ ಹಾಕುವಂತೆ ಲಡಾಖ್ ಗಡಿಯಲ್ಲಿ ಚೀನಾವನ್ನು ತಡೆಯುವುದಕ್ಕೆ ಅದೇ ರೀತಿ ಕ್ರಮ ತೆಗದುಕೊಳ್ಳಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಸಾದುದ್ದೀನ್ ಓವೈಸ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರತಿ ತಿಂಗಳು ನಡೆಸುವ "ಮನ್ ಕೀ ಬಾತ್" ಕಾರ್ಯಕ್ರಮದಂತೆ ರೈತರ "ಮನ್ ಕೀ ಬಾತ್" ಅನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
"ಲಡಾಖ್ ಗಡಿಯ ರಸ್ತೆಯಲ್ಲಿ ಮೊಳೆಗಳು ಮತ್ತು ಸರಪಳಿಗಳನ್ನು ಹಾಕುತ್ತೀರಾ. ಆಗ ಚೀನಾದ ಸೇನೆಯು ಗಡಿಯಲ್ಲಿ ಪ್ರವೇಶಿಸುವುದು ತಪ್ಪುತ್ತದೆ. ಆದರೆ ನೀವು ಲಡಾಖ್ ನಲ್ಲಿ ಮೊಳೆಗಳನ್ನು, ಸರಪಳಿಗಳನ್ನು ಹಾಕಲಿಲ್ಲ, ಹಾಗೂ ಭಾರತೀಯ ಸೇನೆಯ 18 ಯೋಧರು ಹುತಾತ್ಮರಾದರು. ನಿಮಗೆ ನಿಜವಾಗಿಯೂ 56 ಇಂಚಿನ ಎದೆ ಉಳ್ಳವರೇ ಆಗಿದ್ದರೆ, ಚೀನಾಗೆ ಸರಿಯಾದ ಪಾಠವನ್ನು ಕಲಿಸಿ" ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿ ಕಾರಿದ್ದಾರೆ.

"ಮೋದಿಯವರು ಚೀನಾ ಬಗ್ಗೆ ಏಕೆ ಮಾತನಾಡಲ್ಲ"
ಪ್ರಧಾನಿ ಮೋದಿಯವರು ಒಂದೇ ಒಂದು ಬಾರಿ ಚೀನಾದ ಬಗ್ಗೆ ಮಾತನಾಡುವುದಿಲ್ಲ. ಅವರು ಎಲ್ಲರಿಗೂ, ಎಲ್ಲದಕ್ಕೂ ಹೆಸರು ಇಡುತ್ತಾರೆ. ಆದರೆ ಚೀನಾದ ಹೆಸರನ್ನು ಮಾತ್ರ ಉಚ್ಛರಿಸುವುದಿಲ್ಲ ಏಕೆ ಎಂದು ಅಸಾದುದ್ದೀನ್ ಓವೈಸ್ ಪ್ರಶ್ನಿಸಿದ್ದಾರೆ.

"ಅದೆಷ್ಟರ ಮಟ್ಟಿಗೆ ದ್ವೇಷವನ್ನು ಹರಡುತ್ತೀರಿ"
"ನಮ್ಮ ದೇಶವು ಎಲ್ಲಿಗೆ ಹೋಗುತ್ತಿದೆ. ನೀವು ಅದೆಷ್ಟರ ಮಟ್ಟಿಗೆ ದ್ವೇಷವನ್ನು ಹರಡುವುದಕ್ಕೆ ಹೊರಟಿದ್ದೀರಿ. ನಿಮ್ಮನ್ನು ಒಂದು ಪ್ರಶ್ನೆ ಕೇಳುತ್ತೇನೆ. 2020ರಲ್ಲಿ ಚೀನಾ ಏಕೆ ಭಾರತದ ಗಡಿಯನ್ನು ಪ್ರವೇಶಿಸಿತು. ಏಕೆಂದರೆ ಭಾರತದಲ್ಲಿ ಜನರ ನಡುವೆ ಒಗ್ಗಟ್ಟು, ಏಕತೆ ಎಂಬುದಿಲ್ಲ. ಲವ್ ಜಿಹಾದ್, ಕೊರೊನಾ ಜಿಹಾದ್ ಎಂಬ ಹೆಸರಿನಲ್ಲಿ ಪರಸ್ಪರ ಹೊಡೆದಾಡುತ್ತಿದ್ದಾರೆ. ಸರ್ಕಾರವು ಒಗ್ಗಟ್ಟನ್ನು ಸ್ಥಾಪಿಸುವ ಬದಲಿಗೆ ದ್ವೇಷ ಹರಡುತ್ತಿದೆ ಎಂಬುದು ಅವರಿಗೆ ಗೊತ್ತಿದೆ" ಎಂದು ಅಸಾದುದ್ದೀನ್ ಓವೈಸ್ ಕಿಡಿ ಕಾರಿದ್ದಾರೆ.

"ಕೃಷಿ ಕಾಯ್ದೆಗಳು ಭಾರತೀಯ ಸಂವಿಧಾನಕ್ಕೆ ವಿರೋಧ"
ಕೇಂದ್ರ ಸರ್ಕಾರವು ಜಾರಿಗೊಳಿಸಿದ ವಿವಾದಿತ ಮೂರು ಕೃಷಿ ಕಾಯ್ದೆಗಳು ಭಾರತೀಯ ಸಂವಿಧಾನಕ್ಕೆ ವಿರೋಧಿಯಾಗಿವೆ. ಏಕೆಂದರೆ, ಕೃಷಿಯು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ರಾಜ್ಯದ ವಿಷಯದ ಮೇಲೆ ಕೇಂದ್ರ ಸರ್ಕಾರವು ಕಾಯ್ದೆಗಳನ್ನು ರಚಿಸುವ ಯಾವುದೇ ಹಕ್ಕು ಇರುವುದಿಲ್ಲ. ಈ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸುವ ರೈತರನ್ನು ಖಲಿಸ್ತಾನಿಗಳು, ಆದಿವಾಸಿ-ದಲಿತರು, ನಕ್ಸಲರು, ಮತ್ತು ಮುಸ್ಲಿಮರು ಜಿಹಾದಿಗಳು ಎಂದು ಬ್ರಾಂಡ್ ಮಾಡಲಾಗುತ್ತಿದೆ ಎಂದು ಅಸಾದುದ್ದೀನ್ ಓವೈಸ್ ಆರೋಪಿಸಿದ್ದಾರೆ.

ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಗೆ ಓವೈಸಿ ಸಿಡಿಮಿಡಿ
ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಅಸಾದುದ್ದೀನ್ ಓವೈಸಿ ಸಿಡಿಮಿಡಿಗೊಂಡರು. ಮೇಲಿಂದ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗುತ್ತಿದೆ. ದೇಶದಲ್ಲಿ ಬಡವರ ವಾಹನಗಳು ಗಾಳಿ ಮತ್ತು ಪ್ರಧಾನಿ ಮೋದಿ ಮೇಲಿನ ಪ್ರೀತಿಯಿಂದ ಓಡುವುದಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೀಗೆ ಏರಿಕೆ ಮಾಡಿದರೆ, ಬಡವರು ಹೇಗೆ ತಾವೇ ತಮ್ಮ ವಾಹನಗಳನ್ನು ಓಡಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ದೇಶದಲ್ಲಿ ಲಾಕ್ ಡೌನ್ ವೇಳೆ 10 ಕೋಟಿಗೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications