ಹೃದಯ ಕಲಕುವ ದುರಂತ: ಅಗ್ನಿ ಅನಾಹುತಕ್ಕೆ ಮೋದಿ ಆಘಾತ
ನವದೆಹಲಿ, ಜನವರಿ 9: ಮಹಾರಾಷ್ಟ್ರದ ಭಂಡಾರಾ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಹತ್ತು ಮಕ್ಕಳು ಮೃತಪಟ್ಟ ದಾರುಣ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ. ಇದು ಹೃದಯ ಹಿಂಡುವ ದುರಂತ ಎಂದು ಮೋದಿ ಹೇಳಿದ್ದಾರೆ.
'ಮಹಾರಾಷ್ಟ್ರದ ಭಂಡಾರಾದಲ್ಲಿ ಹೃದಯ ಕಲಕುವ ದುರಂತದಲ್ಲಿ ನಾವು ಅಮೂಲ್ಯ ಯುವ ಜೀವಗಳನ್ನು ಕಳೆದುಕೊಂಡಿದ್ದೇವೆ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿದ್ದಾರೆ ಎಂದು ಭರವಸೆ ಹೊಂದಿದ್ದೇನೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
'ಮಹಾರಾಷ್ಟ್ರದ ಭಂಡಾರಾ ಜಿಲ್ಲಾಸ್ಪತ್ರೆಯಲ್ಲಿ ನಡೆದ ಅಗ್ನಿ ಅನಾಹುತ ಬಹಳ ದುರದೃಷ್ಟಕರ. ಈ ನೋವನ್ನು ಪದಗಳಲ್ಲಿ ಹೇಳಲು ಆಗುತ್ತಿಲ್ಲ. ಬಲಿಯಾದ ಮಕ್ಕಳ ಕುಟುಂಬದವರಿಗೆ ನನ್ನ ಸಂತಾಪಗಳು. ಈ ಭರಿಸಲಾಗದ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ' ಎಂದು ಅಮಿತ್ ಶಾ ಹೇಳಿದ್ದಾರೆ.

'ಮಹಾರಾಷ್ಟ್ರದ ಭಂಡಾರಾ ಜಿಲ್ಲಾಸ್ಪತ್ರೆಯಲ್ಲಿನ ದುರದೃಷ್ಟಕರ ಘಟನೆ ತೀವ್ರ ದುರಂತಮಯ. ಘಟನೆಯಲ್ಲಿ ಜೀವ ಕಳೆದುಕೊಂಡ ಮಕ್ಕಳ ಕುಟುಂಬದವರಿಗೆ ನನ್ನ ಸಂತಾಪಗಳು. ಮಹಾರಾಷ್ಟ್ರ ಸರ್ಕಾರವು ಗಾಯಾಳುಗಳು ಮತ್ತು ಮೃತಪಟ್ಟವರ ಕುಟುಂಬದವರಿಗೆ ಶೀಘ್ರವೇ ಎಲ್ಲ ಅಗತ್ಯ ನೆರವುಗಳನ್ನು ನೀಡುವಂತೆ ಕೋರುತ್ತೇನೆ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
'ಆಸ್ಪತ್ರೆಯ ನವಜಾತ ಶಿಶುಗಳ ಆರೈಕೆ ಘಟಕದಲ್ಲಿ ಸಂಭವಿಸಿದ ಅಗ್ನಿ ಅನಾಹುತ ಘಟನೆಯ ಕುರಿತು ಶೀಘ್ರವೇ ತನಿಖೆ ನಡೆಸುವಂತೆ ಒತ್ತಾಯಿಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆ' ಎಂದು ಮಹಾರಾಷ್ಟ್ರ ವಿಧಾನಸಭೆಯ ವಿರೋಧಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.












Click it and Unblock the Notifications