ಕೊನೆಗೂ ಹುಬ್ಬಳ್ಳಿ ಹುಡುಗನ ಸೇರಿದ ಪಾಕಿಸ್ತಾನಿ ಹುಡುಗಿ
ಎರಡು ಶತ್ರು ರಾಷ್ಟ್ರದ ನಡುವಿನ ರಾಜತಾಂತ್ರಿಕ ವೈಮನಸ್ಯಗಳನ್ನೆಲ್ಲ ಮರೆಸುವ ಪಾಕಿಸ್ತಾನದ ಸಿಲ್ವಿಯಾ ನೊರೀನ್ ಮತ್ತು ಹುಬ್ಬಳ್ಳಿ ಡೇನಿಯಲ್ ದೇವನೂರ್ ಎಂಬ ಮುಗ್ಧಪ್ರೇಮಿಗಳ ಪ್ರೇಮಕತೆಯಿದು.
ನವದೆಹಲಿ, ಏಪ್ರಿಲ್ 24: ಪ್ರೀತಿಗೆ ಕಣ್ಣಿಲ್ಲ, ಮಾತ್ರವಲ್ಲ ಅದಕ್ಕೆ ಜಾತಿ, ಮತ, ದೇಶವೆಂಬ ಎಲ್ಲೆಯೂ ಇಲ್ಲ! ಹೌದು ಪ್ರೇಮಕ್ಕೆ ಗಡಿಯಿಲ್ಲ ಎಂಬುದನ್ನು ಸಾಬೀತುಪಡಿಸಲು ಗಡಿ ದಾಟಿ ಬಂದ ಪಾಕಿಸ್ತಾನದ ಸಿಲ್ವಿಯಾ ನೊರೀನ್ ಕತೆ ಇದು. ಎರಡು ಶತ್ರು ರಾಷ್ಟ್ರದ ನಡುವಿನ ರಾಜತಾಂತ್ರಿಕ ವೈಮನಸ್ಯಗಳನ್ನೆಲ್ಲ ಮರೆಸುವ ಮುಗ್ಧ ಪ್ರೇಮಕತೆಯಿದು.
ಪಾಕಿಸ್ತಾನದ ಪ್ರಜೆಯಾಗಿದ್ದ ಸಿಲ್ವಿಯಾ ನೊರೀನ್ ರನ್ನು ಡೇನಿಯಲ್ ದೇವನೂರ್ ಎಂಬ ಹುಬ್ಬಳ್ಳಿಯ ಹುಡುಗ ಗಹನವಾಗಿ ಪ್ರೀತಿಸುತ್ತಿದ್ದರು. ಇಬ್ಬರೂ ದೂರ ಸಂಬಂಧಿಗಳೂ ಆಗಿದ್ದರಿಂದ ಎರಡು ಕುಟುಂಬದಿಂದಲೂ ಇಬ್ಬರ ಮದುವೆಗೆ ಸಮ್ಮತಿಯಿತ್ತು. ಆದರೆ ಸಿಲ್ವಿಯಾ ಇದ್ದಿದ್ದು ಪಾಕಿಸ್ಥಾನದಲ್ಲಿ. ಡೇನಿಯಲ್ ಇದ್ದಿದ್ದು ಕರ್ನಾಟಕದ ಹುಬ್ಬಳ್ಳಿಯಲ್ಲಿ![ಬೆಂಗಳೂರಿನ ಆಸ್ಪತ್ರೆಯಲ್ಲಿ ಪಾಕ್ ಪುಟಾಣಿಗೆ ಮರುಜನ್ಮ]

ಉಭಯ ಕುಟುಂಬಗಳ ಸಮ್ಮುಖದಲ್ಲಿ ಇವರಿಬ್ಬರ ವಿವಾಹ 2016ರ ಜೂನ್ 25 ರಂದೇ ನಡೆದಿದ್ದರೂ, ಆಕೆ ಪತಿಯ ಮನೆಗೆ ಬರುವುದಕ್ಕೆ ಹಲವು ಅಡೆತಡೆಗಳಿದ್ದವು. ಆಕೆ ಭಾರತಕ್ಕೆ ವಾಪಸಾಗಲು ಅಗತ್ಯವಿದ್ದ ಸ್ಪಾನ್ಸರ್ಶಿಪ್ ಸರ್ಟಿಫಿಕೇಟ್ ಗಾಗಿ ಡೇನಿಯಲ್ ಸಾಕಷ್ಟು ಅಧಿಕಾರಿಗಳ ಬಳಿ ಓಡಾಡಿದ್ದರು. ಆಕೆಯ ಭಾರತ ಪ್ರಯಾಣಕ್ಕೆ ಅಗತ್ಯವಿದ್ದ ಗೆಜೆಟೆಡ್ ಆಫೀಸರ್ ವೊಬ್ಬರ ಸಹಿ ಸಿಗದೆ ಡೇನಿಯಲ್ ಪರಿತಪಿಸುತ್ತಿದ್ದರು.[ಸ್ನೇಹ ರೂಪಕದ ಹೃದಯದೊಂದಿಗೆ ನೂರ್‌ಫಾತಿಮಾ ಪಾಕ್‌ನತ್ತ]
ಈ ಸಂದಿಗ್ಧದಲ್ಲಿ ಅವರಿಗೆ ನೆನಪಾಗಿದ್ದು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ . ಏನಾದರಾಗಲಿ ಎಂದು ಅವರಿಗೆ ಈ ಬಗ್ಗೆ ಟ್ವೀಟ್ ಸಹ ಮಾಡಿದ್ದರು. ಸಚಿವರಿಗೆ ಟ್ವೀಟ್ ಮಾಡುತ್ತಿದ್ದಂತೆಯೇ ಅವರಿಗೆ ಅತ್ಯವಿದ್ದ ಸಹಿಯೂ ಸಿಕ್ಕಿತ್ತು! ಡೇನಿಯಲ್ ಅವರ ಸತತ ಪರಿಶ್ರಮಕ್ಕೆ ಫಲ ದೊರೆತಿದ್ದು, ಇದೀಗ ಸಿಲ್ವಿಯಾ ದೆಹಲಿಗೆ ಬಂದಿಳಿದಿದ್ದಾರೆ!
ಈ ವಿಷಯಕ್ಕೆ ಸಂಬಂಧಿಸಿದಂತೆ ತಮಗೆ ನೆರವು ನೀಡುವಂತೆ ಸಂಸದ ಪ್ರಹ್ಲಾದ್ ಜೋಷಿ ಮತ್ತು ಜಗದೀಶ್ ಶೆಟ್ಟರ್ ಅವರನ್ನೂ ಡೇನಿಯಲ್ ಕೇಳಿದ್ದರು. ಅವರಿಂದಲೂ ಧನಾತ್ಮಕ ಪ್ರತಿಕ್ರಿಯೆ ಬಂದಿತ್ತು.
ಸದ್ಯಕ್ಕೆ ಮೆಚ್ಚಿನ ಸೊಸೆಯನ್ನು ಮನೆ ತುಂಬಿಸಿಕೊಳ್ಳಲು ಹುಬ್ಬಳ್ಳಿಯಲ್ಲಿ ಡೇನಿಯಲ್ ಕುಟುಂಬ ಕಾತರದಿಂದ ಕಾಯುತ್ತಿದೆ.












Click it and Unblock the Notifications