"ಭಾರತದಾದ್ಯಂತ ಸರ್ಕಾರಿ ಕಚೇರಿಗಳು ಬದಲಾಗುತ್ತವೆ" ಕೇಂದ್ರಕ್ಕೆ ಟಿಕಾಯತ್ ಎಚ್ಚರಿಕೆ
ಹೊಸದಿಲ್ಲಿ ಅಕ್ಟೋಬರ್ 31: ದೆಹಲಿಯ ಗಡಿಯಿಂದ ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರಹಾಕಲು ಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖ್ಯಸ್ಥ ಟಿಕಾಯತ್, ರೈತರು ದೇಶಾದ್ಯಂತ ಸರ್ಕಾರಿ ಕಚೇರಿಗಳನ್ನು "ಗಲ್ಲಾ ಮಂಡಿಗಳು" (ಧಾನ್ಯ ಮಾರುಕಟ್ಟೆಗಳು) ಆಗಿ ಪರಿವರ್ತಿಸುತ್ತಾರೆ ಎಂದು ಹೇಳಿದರು.
ರೈತರನ್ನು ಗಡಿಯಿಂದ ಬಲವಂತವಾಗಿ ಹೊರಹಾಕುವ ಪ್ರಯತ್ನ ನಡೆದರೆ ದೇಶಾದ್ಯಂತ ಇರುವ ಸರ್ಕಾರಿ ಕಚೇರಿಗಳನ್ನು ಗಲ್ಲಾ ಮಂಡಿಯನ್ನಾಗಿ ಪರಿವರ್ತಿಸುತ್ತಾರೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.
किसानों को अगर बॉर्डरो से जबरन हटाने की कोशिश हुई तो वे देश भर में सरकारी दफ्तरों को गल्ला मंडी बना देंगे ।#FarmersProtest
— Rakesh Tikait (@RakeshTikaitBKU) October 31, 2021
ದೆಹಲಿಯ ಪೊಲೀಸರು ಗಾಜಿಪುರ ಮತ್ತು ಟಿಕ್ರಿ ಗಡಿಯಿಂದ ಸಿಮೆಂಟ್ ಬ್ಲಾಕ್‌ಗಳು ಮತ್ತು ಬ್ಯಾರಿಕೇಡ್‌ಗಳನ್ನು ತೆಗೆದ ಎರಡು ದಿನಗಳ ನಂತರ ಟಿಕಾಯತ್ ಅವರ ಈ ಹೇಳಿಕೆ ಹೊರಬಂದಿದೆ. ರೈತರ ಆಂದೋಲನ ಪ್ರಾರಂಭವಾದಾಗಿನಿಂದ 11 ತಿಂಗಳ ಕಾಲ ಗಡಿ ಭಾಗವನ್ನು ಮುಚ್ಚಲಾಗಿತ್ತು. ಆದರೀಗ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಅನಾನುಕೂಲತೆಯನ್ನು ಉಲ್ಲೇಖಿಸುತ್ತಿದ್ದಾರೆ. ಈ ಹಿಂದೆ ಸರ್ವೋಚ್ಚ ನ್ಯಾಯಾಲಯವು ಪ್ರಯಾಣದಲ್ಲಿ ಉಂಟಾದ ಅನನುಕೂಲತೆಗೆ ಅಧಿಕಾರಿಗಳೇ ಕಾರಣ ಹೊರತು ಪ್ರತಿಭಟನಾನಿರತ ರೈತರಲ್ಲ ಎಂದು ಹೇಳಿತ್ತು.
ನವೆಂಬರ್ 26, 2020 ರಿಂದ ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ಪ್ರತಿಭಟಿಸಿ ಸಾವಿರಾರು ರೈತರು ಮೂರು ಗಡಿ ಬಿಂದುಗಳಾದ ಟಿಕ್ರಿ, ಸಿಂಘು ಮತ್ತು ಗಾಜಿಪುರದಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ. ಕಳೆದ ವರ್ಷ ಜಾರಿಗೆ ತಂದ ಮೂರು ಕಾನೂನುಗಳು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಪ್ರತಿಭಟನಾನಿರತ ರೈತರು ಪ್ರತಿಪಾದಿಸುತ್ತಿದ್ದರೆ, ಕೇಂದ್ರವು ಈ ಕಾನೂನುಗಳು ರೈತ ಪರ ಎಂದು ಹೇಳುತ್ತಿದೆ. ಕೇಂದ್ರ ಮತ್ತು ರೈತರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಅತಂತ್ರ ಸ್ಥಿತಿ ಮುಂದುವರಿದಿದೆ.
ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಬೆಳೆಗಳ ಮೇಲೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡಬೇಕೆಂದು ಒತ್ತಾಯಿಸಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಎರಡು ತಿಂಗಳಿನಿಂದ ದೆಹಲಿಗೆ ಪ್ರಮುಖ ಪ್ರವೇಶ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರ ಮತ್ತು ರೈತರು ನಡುವೆ ಈಗಾಗಲೇ ಈ ಬಗ್ಗೆ ಹಲವಾರು ಸುತ್ತಿನ ಮಾತುಕತೆಗಳಾದರೂ ರೈತರ ಮನವೊಲಿಕೆ ಸಾಧ್ಯವಾಗಿಲ್ಲ. ಒಮ್ಮತದ ಅಭಿಪ್ರಾಯ ಬರುವವರೆಗೂ ಸುಪ್ರೀಂ ಕೋರ್ಟ್ ಮೂರು ಕೃಷಿ ಕಾನೂನುಗಳನ್ನು ಸ್ಥಗಿತಗೊಳಿಸಿದೆ.
ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್, ಜೈ ಕಿಸಾನ್ ಆಂಡೋಲನ್, ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ರಾಜ್ಯ ರೈತ ಸಂಘ, ಜನರ ಚಳುವಳಿಗಳಿಗಾಗಿ ರಾಷ್ಟ್ರೀಯ ಒಕ್ಕೂಟ, ಲೋಕ ಸಂಘರ್ಷ ಮೋರ್ಚಾ, ಅಖಿಲ ಭಾರತ ಕಿಸಾನ್ ಖೇತ್ ಮಜ್ದೂರ್ ಸಂಗಥನ್, ಕಿಸ್ಸಾನ್ ಮಜ್ದೂರ್ ಸಂಘರ್ಷ ಸಮಿತಿ, ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಗಥನ್, ಅಖಿಲ ಭಾರತ ಕಿಸಾನ್ ಮಜ್ದೂರ್ ಸಭಾ, ಕ್ರಾಂತಿಕಾರಿ ಕಿಸಾನ್ ಯೂನಿಯನ್, ಆಶಾ-ಕಿಸಾನ್ ಸ್ವರಾಜ್, ಜನರ ಚಳುವಳಿಗಳಿಗಾಗಿ ರಾಷ್ಟ್ರೀಯ ಒಕ್ಕೂಟ ಹೀಗೆ ಹಲವಾರು ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿವೆ.
ಪ್ರತಿಭಟನಾ ಅವಧಿಯಲ್ಲಿ ಈವರೆಗೆ ರೈಲು ತಡೆ, ಗಡಿ ರಸ್ತೆ ತಡೆ, ಭಾರತ್ ಬಂದ್, ದೇಶವ್ಯಾಪಿ, ಟ್ರ್ಯಾಕ್ಟರ್ ರ್‍ಯಾಲಿ ಪ್ರತಿಭಟನೆಗಳು ನಡೆದಿವೆ. ಆದರೂ ಕೇಂದ್ರ ಸರ್ಕಾರ ಮಾತ್ರ ರೈತರ ಮನವೊಲಿಸುವಲ್ಲಿ ವಿಫಲವಾಗಿದೆ. ಈವರೆಗೆ ಹಲವಾರು ಸುತ್ತಿನ ಮಾತುಕತೆ ನಡೆದಿದ್ದರೂ ಪ್ರಯೋಜನವಾಗಿಲ್ಲ. ಹಲವಾರು ಪ್ರತಿಭಟನಾ ನಿರತ ರೈತರು ಸಾವನ್ನಪ್ಪಿದರೂ ಕೇಂದ್ರ ಸರ್ಕಾರದ ಮನ ಮಾತ್ರ ಕರಗಿಲ್ಲ. ಈವರೆಗೂ ದೇಶದಲ್ಲಿ ಕೇಂದ್ರ ಸರ್ಕಾರದ ಮನವೊಲಿಸಲು ರೈತರು ಹಲವಾರು ಪ್ರತಿಭಟನೆಗಳನ್ನು ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ. ವಿಪಕ್ಷ ನಾಯಕರೂ ಕೂಡ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.