ಕೇಂದ್ರ ಸರ್ಕಾರ ಈರುಳ್ಳಿ ಮಾರಲು ಕುಳಿತಿಲ್ಲ!

ಬುಧವಾರ ಈರುಳ್ಳಿ ಬೆಲೆ ಏರಿಕೆ ಕುರಿತು ಕೇಂದ್ರ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ, ಅವರು ಸಿಡಿಮಿಡಿಗೊಂಡರು. ಬೆಲೆ ಏರಿಕೆ ಬಗ್ಗೆ ವ್ಯಾಪಾರಿಗಳನ್ನು ಕೇಳಿ, ಕೇಂದ್ರ ಸರ್ಕಾರವನ್ನು ಏಕೆ ಕೇಳುತ್ತಿರಿ? ಸರ್ಕಾರವೇನು ಈರುಳ್ಳಿ ಮಾರಾಟ ಮಾಡುತ್ತಿದೆಯೇ? ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದಕ್ಕೆ ಮೊದಲು ಇದೇ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ಶರದ್ ಪವಾರ್, 'ಈರುಳ್ಳಿ ಬೆಲೆ ಏರಿಕೆ ಬಗ್ಗೆ ಸಾಕಷ್ಟು ಮಾತುಕತೆ ಕೇಳಿಬರುತ್ತಿದೆ. ಆದರೆ, ಬೆಲೆ ಇಳಿದಾಗ ರೈತರ ಬಗ್ಗೆ ಯಾರೂ ಕಾಳಜಿ ತೋರಿಸುತ್ತಿಲ್ಲ. ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚು ಬೆಲೆ ಪಡೆಯುವಂತಾದಾಗ ನಾವು ದೂರಬಾರದು' ಎಂದು ಉತ್ತರಿಸಿದ್ದರು.
ಬೆಲೆ ಏರಿಕೆಯಾದಾಗ ಅದು ರೈತರಿಗೆ ತಲುಪುತ್ತದೆ ಸರಿ, ಆದರೆ,ಸಾಮಾನ್ಯ ಜನರ ಕಷ್ಟವನ್ನು ಕೇಳುವವರು ಯಾರು? ಎಂದು ಮಾಧ್ಯಮಗಳು ಮತ್ತೊಮ್ಮೆ ಪ್ರಶ್ನಿಸಿದಾಗ ಸಚಿವರು ಉತ್ತರ ನೀಡದೆ ಸ್ಥಳದಿಂದ ನಿರ್ಗಮಿಸಿದರು. (ಮತ್ತೆ ಜನರಿಂದ ದೂರವಾಗುತ್ತಿರುವ ಈರುಳ್ಳಿ)
ಈ ಮಧ್ಯೆ ಪೂರೈಕೆ ಕಡಿಮೆ ಇರುವುದನ್ನೇ ಬಂಡವಾಳ ಮಾಡಿಕೊಂಡು, ಈರುಳ್ಳಿ ಬೆಲೆಯನ್ನು ಕೃತಕವಾಗಿ ಏರಿಸುತ್ತಿರುವ ವ್ಯಾಪಾರಿಗಳು ಮತ್ತು ದಲ್ಲಾಳಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮಹಾರಾಷ್ಟ್ರ ಸಹಿತ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿ, ಈರುಳ್ಳಿ ಬೆಲೆ ತಗ್ಗಿಸುವ ಕಾರ್ಯಕ್ಕೆ ಮುಂದಾಗಿದೆ.
ಈರುಳ್ಳಿ ಪೂರೈಕೆಯಲ್ಲಿ ಯಾವುದೇ ಆಡಚಣೆ ಉಂಟಾದರೂ ತಕ್ಷಣವೇ ಕೇಂದ್ರಕ್ಕೆ ಮಾಹಿತಿ ನೀಡುವಂತೆಯೂ ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. 2012ರಲ್ಲಿ ಸಂಗ್ರಹಿಸಲಾಗಿದ್ದ ಶೇ.90ರಷ್ಟು ಈರುಳ್ಳಿಯೂ ಈಗ ಬಳಕೆಯಾಗಿಬಿಟ್ಟಿದೆ. ಈಗ ಕೇವಲ 3-4 ಲಕ್ಷ ಟನ್ ಮಾತ್ರ ಬಳಕೆಗೆ ಉಳಿದಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಆಹಾರ ಸಚಿವಾಲಯ ತಿಳಿಸಿದೆ.












Click it and Unblock the Notifications