ಗಂಗಾ ವಿಲಾಸ್: ಇರುವುದನ್ನೇ ಮತ್ತೆ ಉದ್ಘಾಟನೆ ಮಾಡುವುದು ಬಿಜೆಪಿ ಕೆಲಸ; ಅಖಿಲೇಶ್ ಯಾದವ್
ನವದೆಹಲಿ, ಜ. 15: ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಗಂಗಾ ವಿಲಾಸ್‌ಗೆ ಚಾಲನೆ ನೀಡಿದ ಒಂದು ದಿನದ ನಂತರ, ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಶನಿವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತೀಯ ಜನತಾ ಪಕ್ಷವು ಎಲ್ಲಾ ಯೋಜನೆಗಳನ್ನು ಮರು ಉದ್ಘಾಟನೆ ಮಾಡುವ ಸಂಪ್ರದಾಯವನ್ನು ಹೊಂದಿದೆ. ಈ ಐಶಾರಾಮಿ ನದಿ ಹಡಗು ಕಳೆದ 17 ವರ್ಷಗಳಿಂದ ಸೇವೆಯಲ್ಲಿದೆ. ಜೊತೆಗೆ ಇದರಲ್ಲಿ ಈಗ ಮದ್ಯವನ್ನು ಪೂರೈಸುವ ಬಾರ್‌ಗಳನ್ನು ಹೊಂದಿದೆ. ಚುನಾವಣೆಯ ಉದ್ದೇಶಕ್ಕಾಗಿ ಬಿಜೆಪಿಯು ಪ್ರಚಾರದ ಸಮಯದಲ್ಲಿ ಅಸ್ತಿತ್ವದಲ್ಲಿರುವ ವಸ್ತುಗಳನ್ನು ಮರು ಉದ್ಘಾಟನೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಹಡಗಿನಲ್ಲಿರುವ ಬಾರ್‌ಗಳ ಬಗ್ಗೆ ಬಿಜೆಪಿಯವರೇ ಪ್ರಸ್ತುತಪಡಿಸಬೇಕು. ಏಕೆಂದರೆ ಅವರೇ ಅಲ್ಲಿ ನೋಡಿರುವುದು ನಾನಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ರಾಯ್‌ಬರೇಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, "ಈ ನದಿ ನೌಕಾಯಾನ ಹಲವು ವರ್ಷಗಳಿಂದ ನಡೆಯುತ್ತಿದೆ. ಇದು ಹೊಸದಲ್ಲ, ಕಳೆದ 17 ವರ್ಷಗಳಿಂದ ನಡೆಯುತ್ತಿದೆ ಎಂದು ಯಾರೋ ನನಗೆ ತಿಳಿಸಿದ್ದಾರೆ. ಬಿಜೆಪಿ ಇದಕ್ಕೆ ಸ್ವಲ್ಪ ಅಭಿವೃದ್ಧಿ ಮಾಡಿ, ನಾವು ಅದನ್ನು ಪ್ರಾರಂಭಿಸಿದ್ದೇವೆ ಎಂದು ಹೇಳಿ ಪ್ರಚಾರ ಮತ್ತು ಸುಳ್ಳು ಹೇಳುವುದರಲ್ಲಿ ಬಿಜೆಪಿ ತುಂಬಾ ಮುಂದಿದೆ. ಪವಿತ್ರ ಗಂಗಾ ನದಿಯಲ್ಲಿನ ಈ ವಿಹಾರ ನೌಕಾಯಾನವು ವಿಹಾರ ಮಾತ್ರವಲ್ಲದೆ ಮದ್ಯವನ್ನು ಪೂರೈಸುವ ಬಾರ್‌ಗಳನ್ನು ಸಹ ಹೊಂದಿದೆ ಎಂದು ನಾನು ಕೇಳಿದ್ದೇನೆ" ಎಂದು ಆರೋಪಿಸಿದ್ದಾರೆ.
"ಇತ್ತೀಚಿನವರೆಗೂ, ನಾವು ಗಂಗಾ ಮಾತೆಗೆ ಆರತಿ ಎಂಬುದನ್ನು ಕೇಳುತ್ತಿದ್ದೆವು. ಧಾರ್ಮಿಕ ಸ್ಥಳದಲ್ಲಿ ಕುಳಿತು ಭಕ್ತಿಯ ಭಜನೆಗಳನ್ನು ಕೇಳುತ್ತಿದ್ದೆವು, ನಾವು ಗಂಗಾನದಿಯಲ್ಲಿ ದೋಣಿ ವಿಹಾರಕ್ಕೆ ಹೋದಾಗಲೆಲ್ಲಾ ನಾವು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬುದನ್ನು ಜನರು ವಿವರಿಸುತ್ತಾರೆ. ನಾವು ಇನ್ನೂ ಹಡಗಿನ ಒಳಗೆ ಪ್ರವೇಶಿಸಿಲ್ಲ. ಕ್ರೂಸ್‌ನಲ್ಲಿ ಬಾರ್ ಇದೆಯೇ ಎಂದು ಈಗ ಬಿಜೆಪಿಯವರು ಮಾತ್ರ ಹೇಳಬಹುದು" ಎಂದಿದ್ದಾರೆ.

'ಧಾರ್ಮಿಕ ಸ್ಥಳಗಳನ್ನು ಪ್ರವಾಸಿ ಸ್ಥಳಗಳನ್ನಾಗಿ ಮಾಡಿ ಹಣ ಗಳಿಸುವ ಬಿಜೆಪಿ ನೀತಿ ಖಂಡನೀಯ. ಜಗತ್ತಿನಾದ್ಯಂತ ಜನರು ಕಾಶಿಯ ಆಧ್ಯಾತ್ಮಿಕ ವೈಭವವನ್ನು ಅನುಭವಿಸಲು ಬರುತ್ತಾರೆಯೇ ಹೊರತು ಐಷಾರಾಮಿಗಾಗಿ ಅಲ್ಲ' ಎಂದು ಕಿಡಿಕಾರಿದ್ದಾರೆ.
ಶುಕ್ರವಾರ ಪ್ರಧಾನಿ ಮೋದಿ ವಾರಣಾಸಿಯಲ್ಲಿ ಗಂಗಾ ವಿಲಾಸ್‌ಗೆ ವರ್ಚುವಲ್ ಆಗಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದ್ದಾರೆ.
ಗಂಗಾ ವಿಲಾಸ್ ನದಿ ಹಡಗು ಉತ್ತರ ಪ್ರದೇಶದ ವಾರಣಾಸಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿ, 51 ದಿನಗಳಲ್ಲಿ ಸುಮಾರು 3,200 ಕಿಮೀ ಪ್ರಯಾಣಿಸಿ ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪುತ್ತದೆ.
ಈ ಐಶಾರಾಮಿ ಹಡಗು 36 ಪ್ರವಾಸಿಗರ ಸಾಮರ್ಥ್ಯದೊಂದಿಗೆ 18 ಸೂಟ್‌ಗಳನ್ನು ಹೊಂದಿದೆ. ಎಲ್ಲಾ ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ. ಮೊದಲ ಪ್ರಯಾಣದಲ್ಲಿ ಸ್ವಿಟ್ಜರ್ಲೆಂಡ್‌ನಿಂದ 32 ಪ್ರವಾಸಿಗರು ಪ್ರಯಾಣ ಹೊರಟಿದ್ದಾರೆ.












Click it and Unblock the Notifications