ಪಂಚೆ, ಶಲ್ಯ ತೊಟ್ಟು ಸಂಸತ್ ಪ್ರವೇಶಿಸಿದ ತೇಜಸ್ವಿ ಸೂರ್ಯ
ನವದೆಹಲಿ, ಜೂನ್ 17: ಮೊದಲ ಬಾರಿಗೆ ಸಂಸತ್ ಪ್ರವೇಶಿಸುವ ಸಂಭ್ರಮ, ಅವಿಸ್ಮರಣೀಯ ಕ್ಷಣದಲ್ಲಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಯುವ ಸಂಸದರ ಪೈಕಿ ಒಬ್ಬರಾಗಿರುವ ತೇಜಸ್ವಿ ಸೂರ್ಯ ಅವರು ಸಂಸತ್ ಪ್ರವೇಶಕ್ಕೂ ಮುನ್ನ ಮಾತನಾಡಿದರು.
17ನೇ ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳಲು ಮೈಸೂರು ಶೈಲಿಯ ಪಂಚೆ, ಶಲ್ಯ ಧರಿಸಿ ತೇಜಸ್ವಿ ಸೂರ್ಯ ಅವರು ಬಂದಿದ್ದು ವಿಶೇಷವಾಗಿತ್ತು. ಕೊಡಗು -ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಎರಡನೇ ಬಾರಿ ಸಂಸದರಾದ ಸಂತಸದಲ್ಲಿ ಈ ಬಾರಿ ಕೊಡವರ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು.
ಇವರಿಬ್ಬರ ಜೊತೆಗೆ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಬಾಲಿವುಡ್ಡಿನ ಹಿರಿಯ ನಟ ಸನ್ನಿ ಡಿಯೋಲ್, ಭೋಜ್ ಪುರಿ ನಟ, ದೆಹಲಿ ಸಂಸದ ರವಿ ಕಿಷನ್ ಅವರು ಕಪ್ಪುಬಣ್ಣದ ಗಾಗಲ್ಸ್, ನೀಲಿ ವೇಸ್ಟ್ಕೋಟ್ ಧರಿಸಿ ಗಮನ ಸೆಳೆದರು.

ತೇಜಸ್ವಿ ಸೂರ್ಯ ಮಾತು: ಸಂಸತ್ ಭವನದೊಳಗೆ ಹೋಗುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನನ್ನು ಆಯ್ಕೆ ಮಾಡಿದ ಜನರಿಗೆ ವಿನಯಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತಾ, ಸಂಸತ್ ಭವನವನ್ನು ಪ್ರವೇಶಿಸುತ್ತಿದ್ದೇನೆ ಎಂದರು.
ಸಂಸತ್ ಭವನ ಬಹುದೊಡ್ಡ ಸಂಸ್ಥೆ. ನಮ್ಮ ದೇಶದ ಭೂತ, ವರ್ತಮಾನ ಮತ್ತು ಭವಿಷ್ಯತ್ತಿನ ಹಣೆಬರಹ ನಿರ್ಧಾರವಾಗಿರುವ, ನಿರ್ಧಾರವಾಗಲಿರುವ ಪವಿತ್ರ ಸ್ಥಳವಿದು. ಇಂಥ ಪವಿತ್ರ ಸ್ಥಳದಲ್ಲಿ ಕುಳಿತು ಭಾರತ ಮಾತೆಯ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಆದರ್ಶದೊಂದಿಗೆ ಸಂಸತ್ನ ಒಳಗೆ ಮತ್ತು ಹೊರಗೆ ಹೋರಾಡುವೆ ಎಂದರು.












Click it and Unblock the Notifications