ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಕಾಯ್ದೆ ರದ್ಧತಿ ಮಸೂದೆ ಅಂಗೀಕರಿಸಿದರೂ ಹೋರಾಟ ನಿಲ್ಲಿಸಲ್ಲ: ಟಿಕಾಯತ್

|
Google Oneindia Kannada News

ನವದೆಹಲಿ, ನವೆಂಬರ್ 29: ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ಲೋಕಸಭೆಯಲ್ಲಿ ಕೃಷಿ ಕಾಯ್ದೆಗಳ ರದ್ಧತಿ ಮಸೂದೆ, 2021 ಅನ್ನು ಅಂಗೀಕರಿಸಲಾಗಿದೆ. ಆದರೆ ನಮ್ಮ ಬೇಡಿಕೆಗಳು ಇನ್ನೂ ಪೂರ್ಣವಾಗಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಉತ್ತರ ಪ್ರದೇಶದ ಕೌಶಂಬಿಯಲ್ಲಿ ಮಾತನಾಡಿದ ರೈತ ಮುಖಂಡ ರಾಕೇಶ್ ಟಿಕಾಯತ್, ಇದು ರೈತರ ಪ್ರತಿಭಟನೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಎಲ್ಲಾ 750 ರೈತರಿಗೆ ಗೌರವವಾಗಿದೆ. ಇದರ ಜೊತೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ಇತರೆ ಸಮಸ್ಯೆಗಳು ಇನ್ನೂ ಬಾಕಿ ಉಳಿದಿವೆ. ಹೀಗಾಗಿ ಸದ್ಯಕ್ಕೆ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಯಾವುದೇ ಪ್ರತಿಭಟನೆಗಳು ನಡೆಯಬಾರದು ಎಂದು ಕೇಂದ್ರ ಸರ್ಕಾರ ಬಯಸುತ್ತದೆ. ಆದರೆ ಇತರ ವಿಷಯಗಳು ಸೇರಿದಂತೆ ಎಂಎಸ್‌ಪಿ ಕುರಿತು ಯಾವುದೇ ಚರ್ಚೆ ನಡೆಯದ ಹೊರತಾಗಿ ನಾವು ಪ್ರತಿಭಟನಾ ಸ್ಥಳದಿಂದ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ, ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.

Farmer Leader Rakesh Tikait refuses to end the protests after Lok Sabha passes Repeal Farm Laws Bill

ರೈತರು ಮನೆಗೆ ವಾಪಸ್ಸಾಗುವಂತೆ ಕೃಷಿ ಸಚಿವರ ಮನವಿ:

ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿ ಮನೆಗೆ ವಾಪಸ್ ಆಗುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿಕೊಂಡಿದ್ದರು. ಇದೇ ವೇಳೆ ರೈತರು ಹೊಲ-ಗದ್ದೆಗಳಲ್ಲಿ ಬೆಳೆ ನಂತರದ ಹುಲ್ಲು ಸುಡುವುದು ಅಪರಾಧವಲ್ಲ ಎಂದು ಪರಿಗಣಿಸುವಂತೆ ಸಲ್ಲಿಸಿದ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಘೋಷಿಸಿದ್ದರು.

ಕನಿಷ್ಠ ಬೆಂಬಲ ಬೆಲೆ ಬೇಡಿಕೆ ಈಡೇರಿಕೆ:

"ಕೇಂದ್ರ ಸರ್ಕಾರ ರಚಿಸುತ್ತಿರುವ ಈ ಸಮಿತಿಯ ಸಂವಿಧಾನದೊಂದಿಗೆ ಕನಿಷ್ಛ ಬೆಂಬಲ ಬೆಲೆ(MSP) ಮೇಲಿನ ರೈತರ ಬೇಡಿಕೆಯನ್ನು ಈಡೇರಿಸುತ್ತದೆ. ಹೊಲಗದ್ದೆಯಲ್ಲಿ ಪೈರಿನ ನಂತರ ಕಸ ಸುಡುವುದನ್ನು ಅಪರಾಧ ಅಲ್ಲದಂತೆ ಪರಿಗಣಿಸಲು ರೈತ ಸಂಘಟನೆಗಳು ಒತ್ತಾಯಿಸಿದ್ದವು. ಭಾರತ ಸರ್ಕಾರ ಈ ಬೇಡಿಕೆಯನ್ನೂ ಒಪ್ಪಿಕೊಂಡಿದೆ. ಹೀಗಿರುವಾಗ ರೈತರು ಆಂದೋಲನವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸಿ ಮನೆಗೆ ಹೋಗಬೇಕೆಂದು ನಾನು ಒತ್ತಾಯಿಸುತ್ತೇನೆ," ಎಂದು ತೋಮರ್ ಹೇಳಿದ್ದರು.

ಕೇಂದ್ರ ಸರ್ಕಾರದ ಘೋಷಣೆಗೆ ಪ್ರತಿಕ್ರಿಯಿಸಿದ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್, "ನಾವು ರಚಿಸಲಾದ ಸಮಿತಿಯ ವಿವರಗಳನ್ನು ಓದಿಲ್ಲ. ವಿವರಗಳ ಬಗ್ಗೆ ನಮಗೆ ತಿಳಿಸಿದ ನಂತರವೇ ನಾವು ಪ್ರತಿಕ್ರಿಯಿಸುತ್ತೇವೆ ಮತ್ತು ಕ್ರಮ ಕೈಗೊಳ್ಳುತ್ತೇವೆ," ಎಂದು ತಿಳಿಸಿದ್ದರು.

ಕೃಷಿ ಕಾಯ್ದೆ ರದ್ಧತಿ ಮಸೂದೆ 2021 ಅಂಗೀಕಾರ:

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಹೊಸ ಮಸೂದೆಯ ಮೇಲೆ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದು ಕುಳಿತಿದ್ದವು. ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಕಾಯ್ದೆಗಳ ರದ್ದತಿ ಮಸೂದೆ, 2021 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಧ್ವನಿಮತದ ಮೂಲಕ ಕೇಂದ್ರ ಸರ್ಕಾರವು ಮಸೂದೆಯನ್ನು ಅಂಗೀಕರಿಸಿದೆ.

ಕೃಷಿ ಕಾಯ್ದೆ ರದ್ಧತಿ 2021ರ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವುದಕ್ಕೆ ಆರಂಭಿಸಿದರು. ಈ ವೇಳೆ ಪ್ರತಿಪಕ್ಷಗಳು ಶಾಂತಿ ಕಾಪಾಡಿದರೆ ಚರ್ಚೆಗೆ ಅವಕಾಶ ನೀಡಬಹುದು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದರು.

ರೈತರ ಕೆಂಗಣ್ಣಿಗೆ ಗುರಿಯಾಗಿದ್ದ ಕೃಷಿ ಕಾಯ್ದೆಗಳು:

ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020, (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಅನ್ನು ರದ್ದುಗೊಳಿಸುವುದಕ್ಕಾಗಿ ಕೃಷಿ ಕಾಯ್ದೆ ರದ್ಧತಿ 2021ರ ಮಸೂದೆಯನ್ನು ರಚಿಸಲಾಗಿತ್ತು. ಈ ಹಿಂದೆ ನವೆಂಬರ್ 24ರಂದು ಈ ಸಂಬಂಧ ಕೇಂದ್ರ ಸಂಪುಟದ ಅನುಮೋದನೆಯನ್ನು ಪಡೆದುಕೊಳ್ಳಲಾಗಿತ್ತು.

ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ವಿವಿಧ ರೈತ ಸಂಘಗಳ ಆಶ್ರಯದಲ್ಲಿ ಸಾವಿರಾರು ರೈತರು ಕಳೆದ 2020ರ ನವೆಂಬರ್ 26 ರಿಂದ ದೆಹಲಿಯ ಘಾಜಿಪುರ, ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಮೇಲೆ ಖಾಸಗೀಕರಣವನ್ನು ಹೇರುತ್ತಿರುವುದಕ್ಕೆ ಹಾಗೂ ಕಾರ್ಪೊರೇಟ್‌ಗಳ ಪರ ಒಲವು ಹೊಂದಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

Recommended Video

Revanna ರೈತರ ಕಷ್ಟಗಳನ್ನು ಪರಿಶೀಲಸಿದ ವಿಶೇಷ ಕ್ಷಣಗಳು | Oneindia Kannada

English summary
Farmer Leader Rakesh Tikait refuses to end the protests after Lok Sabha passes Repeal Farm Laws Bill. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X