ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ರದ್ದು
ನವದೆಹಲಿ, ಏಪ್ರಿಲ್ 16: ತಮಿಳುನಾಡಿನ ವೆಲ್ಲೂರಿನಲ್ಲಿ ಲೋಕಸಭಾ ಚುನಾವಣೆ ರದ್ದು ಮಾಡಲು ಸೋಮವಾರ ಚುನಾವಣೆ ಆಯೋಗ ನಿರ್ಧರಿಸಿದೆ. ಕೆಲ ದಿನಗಳ ಹಿಂದೆ ಡಿಎಂಕೆ ಅಭ್ಯರ್ಥಿಯ ಕಚೇರಿಯಲ್ಲಿ ಭಾರೀ ಮೊತ್ತವನ್ನು ವಶಪಡಿಸಿಕೊಂಡ ಅರೋಪದಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಇಲಾಖೆ ವರದಿ ಆಧಾರದಲ್ಲಿ ಆ ಜಿಲ್ಲೆಯ ಪೊಲೀಸರು ಆರೋಪಿ ಕದಿರ್ ಆನಂದ್ ಹಾಗೂ ಡಿಎಂಕೆ ಇಬ್ಬರು ಪದಾಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ವೆಲ್ಲೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ರದ್ದು ಮಾಡಬೇಕು ಎಂಬ ಶಿಫಾರಸನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ ಎಂದು ಚುನಾವಣೆ ಆಯೋಗ ಹೇಳಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.
ನಾಮಪತ್ರದ ಜತೆಗೆ ಆನಂದ್ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಪ್ಪು ಮಾಹಿತಿ ನೀಡಿರುವ ಬಗ್ಗೆ ಜನ ಪ್ರತಿನಿಧಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ಶ್ರೀನಿವಾಸನ್ ಹಾಗೂ ದಾಮೋದರನ್ ವಿರುದ್ಧ ಭ್ರಷ್ಟಾಚಾರದ ಆರೋಪ ಇದೆ. ಡಿಎಂಕೆ ಹಿರಿಯ ನಾಯಕ ದುರೈ ಮುರುಗನ್ ಅವರ ಮಗನೇ ಈ ಆನಂದ್.

ಮಾರ್ಚ್ 30ನೇ ತಾರೀಕು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಹೆಚ್ಚುವರಿ ಹತ್ತೂವರೆ ಲಕ್ಷ ನಗದು ಪತ್ತೆಯಾಗಿತ್ತು. ಅದಾಗಿ ಎರಡು ದಿನಕ್ಕೆ ಅದೇ ಜಿಲ್ಲೆಯ ಡಿಎಂಕೆ ನಾಯಕನಿಗೆ ಸೇರಿದ ಸಿಮೆಂಟ್ ಗೋಡೌನ್ ನಲ್ಲಿ ಹನ್ನೊಂದೂವರೆ ಕೋಟಿ ಸಿಕ್ಕಿತ್ತು.












Click it and Unblock the Notifications