ಮೂರನೇ ದಿನ ಇಡಿಯಿಂದ ಡಿ.ಕೆ.ಶಿವಕುಮಾರ್ ವಿಚಾರಣೆ
ನವದೆಹಲಿ, ಸೆಪ್ಟೆಂಬರ್ 02: ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಮತ್ತೆ ಇಡಿ (ಜಾರಿ ನಿರ್ದೇಶನಾಲಯ) ವಿಚಾರಣೆ ನಡೆಸಲಿದೆ.
ಡಿ.ಕೆ.ಶಿವಕುಮಾರ್ ಅವರನ್ನು ಶುಕ್ರವಾರದಿಂದಲೂ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಭಾನುವಾರ ರಜೆ ದಿನ ಆದ್ದರಿಂದ ಅಂದು ಹೊರತುಪಡಿಸಿ ಶುಕ್ರವಾರ ಮಧ್ಯಾಹ್ನದಿಂದ ರಾತ್ರಿ 11 ರವರೆಗೆ ಮತ್ತು ಶನಿವಾರ ಬೆಳಿಗ್ಗೆ 11 ರಿಂದ ರಾತ್ರಿ 11 ರ ವರೆಗೆ ದೀರ್ಘವಾಗಿ ವಿಚಾರಣೆ ನಡೆಸಲಾಗಿದೆ.
ಸೋಮವಾರ ಬೆಳಿಗ್ಗೆ 11 ಗಂಟೆಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್‌ಗೆ ಇಡಿ ಅಧಿಕಾರಿಗಳು ಶನಿವಾರವೇ ಸೂಚಿಸಿದ್ದರು. ಅಂತೆಯೇ ಶಿವಕುಮಾರ್ ಅವರು ಇಂದು 11 ಗಂಟೆಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ಅವರು ಶುಕ್ರವಾರದಿಂದಲೂ ದೆಹಲಿಯಲ್ಲಿಯೇ ತಂಗಿದ್ದಾರೆ.

ಇಂದು ಡಿ.ಕೆ.ಶಿವಕುಮಾರ್ ತಂದೆಯವರ ಕಾರ್ಯ ಇದ್ದು, ಇಂದು ತಾವು ಕೆಲವು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಇಡಿ ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಆದರೆ ಡಿ.ಕೆ.ಶಿವಕುಮಾರ್ ಅವರ ಮನವಿಯನ್ನು ಅಧಿಕಾರಿಗಳನ್ನು ನಿರಾಕರಿಸಿದ್ದು, ಕಡ್ಡಾಯವಾಗಿ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ರೀತಿಯಾಗಿ ಆಗಿಲ್ಲ. ಆದರೆ ಬಂಧನ ಭೀತಿ ಪೂರ್ಣವಾಗಿಯೂ ದೂರವಾಗಿಲ್ಲ. ಡಿ.ಕೆ.ಶಿವಕುಮಾರ್ ಅವರು ನೀಡುವ ಉತ್ತರಗಳು ಇಡಿ ಅಧಿಕಾರಿಗಳಿಗೆ ಸಮಂಜಸವಾಗಿಲ್ಲವೆಂದರೆ ಡಿಕೆಶಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.












Click it and Unblock the Notifications