Breaking; ಜಹಾಂಗಿರ್‌ಪುರಿಯಲ್ಲಿ ಕಟ್ಟಡ ತೆರವು, ಬಿಗಿ ಭದ್ರತೆ
ನವದೆಹಲಿ, ಏಪ್ರಿಲ್ 20; ಹನುಮ ಜಯಂತಿ ಮೆರವಣಿಗೆ ವೇಳೆ ಶನಿವಾರ ನವದೆಹಲಿಯ ಜಹಾಂಗಿರ್‌ಪುರಿಯಲ್ಲಿ ಗಲಭೆ ನಡೆದಿತ್ತು. ಈಗ ಈ ಪ್ರದೇಶದಲ್ಲಿರುವ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ಕೈಗೊಳ್ಳಲಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಜಹಾಂಗಿರ್‌ಪುರಿಯಲ್ಲಿ ನಡೆದ ಗಲಭೆ ಬಳಿಕ ಈ ಪ್ರದೇಶದಲ್ಲಿರುವ ಅಕ್ರಮ ಕಟ್ಟಡಗಳ ತೆರವಿಗೆ ಕಾರ್ಯಾಚರಣೆ ನಡೆಸಲಾಗುತ್ತದೆ. ಮೂರು ದಿನ ಈ ಕಾರ್ಯಾಚರಣೆ ನಡೆಯಲಿದ್ದು, ಈ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.
ದೆಹಲಿ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರು ಕಟ್ಟಡಗಳ ತೆರವು ಕಾರ್ಯಾಚರಣೆ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು 400 ಸಿಬ್ಬಂದಿಗಳ ಅಗತ್ಯವಿದೆ ಎಂದು ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದರು.

ಬುಧವಾರ ಬೆಳಗ್ಗೆ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಕೈಗೊಳ್ಳಲು ಜಹಾಂಗಿರ್‌ಪುರಿಗೆ ಆಗಮಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿದೆ.
ಏಪ್ರಿಲ್ 20ರ ಬುಧವಾರದಿಂದ ಎರಡು ಅಥವ ಮೂರು ದಿನಗಳ ಕಾಲ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತದೆ ಎಂದು ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ನವದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತ ಗುರುವಾರ ದೆಹಲಿ ಮಹಾನಗರ ಪಾಲಿಕೆಗೆ ಪತ್ರವೊಂದನ್ನು ಬರೆದಿದ್ದರು. ಜಹಾಂಗಿರ್‌ಪುರಿ ಪ್ರದೇಶದಲ್ಲಿರುವ ಅಕ್ರಮ ಕಟ್ಟಡಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಿ ಎಂದು ಪತ್ರದಲ್ಲಿ ಒತ್ತಾಯಿಸಿದ್ದರು.
We will provide security to the civic agency (NDMC) for the anti-encroachment drive. Adequate force is available. Focus is on law & order situation: Special Commissioner of Police,Law & Order,Delhi Police pic.twitter.com/F7nknaFgVX
— ANI (@ANI) April 20, 2022
ದೆಹಲಿ ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಒಟ್ಟಾಗಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ. ಶನಿವಾರ ಹನುಮ ಜಯಂತಿ ಮೆರವಣಿಗೆ ವೇಳೆ ನಡೆದ ಗಲಭೆ ಬಗ್ಗೆ ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ವರದಿ ಸಲ್ಲಿಕೆ ಮಾಡಿದ್ದರು. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಉಲ್ಲೇಖಿಸಿದ್ದರು.












Click it and Unblock the Notifications