ಆನ್ ಲೈನ್ ಗೇಮ್ ಚಟಕ್ಕೆ ಪಾಲಕರನ್ನೇ ಕೊಂದ ಮಗ!
ನವದೆಹಲಿ, ಅಕ್ಟೋಬರ್ 12: ನವದೆಹಲಿಯಲ್ಲಿ ಅ.10 ರಂದು ನಡೆದ ತ್ರಿವಳಿ ಕೊಲೆ ಪ್ರಕರಣ ದಿನೇ ದಿನೇ ರೋಚಕ ತಿರುವು ಪಡೆಯುತ್ತಿದೆ.
ಆನ್ ಲೈನ್ ಗೇಮ್ ಚಟಕಕೆ ದಾಸನಾಗಿದ್ದ ಪುತ್ರನೇ ತಂದೆ-ತಾಯಿ ಮತ್ತು ತಂಗಿಯನ್ನು ಕೊಂದಿದ್ದಾನೆಂಬುದು ಪೊಲೀಸರ ತನಿಖೆಯ ವೇಳೆಯಲ್ಲಿ ಬಹಿರಂಗವಾಗಿದೆ.
ಬುಧವಾರ ಬೆಳಿಗ್ಗೆ ಸುಮಾರು 5 ಗಂಟೆಯ ಸಮಯದಲ್ಲಿ ದೆಹಲಿಯ ವಸಂತ್ ಕುಂಜ್ ಎಂಬಲ್ಲಿ, ಮನೆಯೊಂದರಲ್ಲಿ ಮಿತಿಲೇಶ್ ಮತ್ತು ಸಿಯಾ ಎಂಬ 40 ವರ್ಷದ ಆಸು ಪಾಸಿನ ದಂಪತಿ ಮತ್ತು ಅವರ 16 ವರ್ಷ ವಯಸ್ಸಿನ ಪುತ್ರಿ ನೇಹಾ ಹತ್ಯೆಗೊಳಗಾಗಿದ್ದರು. ಮನೆಗೆಲಸಕ್ಕೆಂದು ಬಂದ ಮಹಿಳೆಗೆ ಮೊದಲು ಶವಗಳು ಕಂಡಿದ್ದು, ತಕ್ಷಣವೇ ನೆರೆಹೊರೆಯವರ ಮೂಲಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪುತ್ರನನ್ನು ಮೊದಲು ವಿಚಾರಣೆಗೊಳಪಡಿಸಿದ್ದರು.

ಈ ಸಂದರ್ಭದಲ್ಲಿ ತಾನೇ ಕೊಲೆ ಮಾಡಿದ್ದಾಗಿ ಪುತ್ರ ಒಪ್ಪಿಕೊಂಡಿದ್ದ. 'ಪಾಲಕರು ತನ್ನ ಜೀವನ ಶೈಲಿಗೆ ಅಡ್ಡಬರುತ್ತಿರುವುದು ಮತ್ತು ಓದುವಂತೆ ತನ್ನ ಮೇಲೆ ಒತ್ತಡ ಹೇರುತ್ತಿರುವುದನ್ನು ಸಹಿಸಲಾಗದೆ ತಂದೆಯನ್ನು ಕೊಲ್ಲುವುದಕ್ಕೆಂದು ಮುಂದಾಗಿದ್ದೆ. ಆಗ ತಾಯಿ ಮತ್ತು ತಂಗಿ ತಡೆಯಲು ಬಂದಿದ್ದರಿಂದ ಅವರನ್ನೂ ಕೊಂದೆ' ಎಂದು ಯುವಕ ಒಪ್ಪಿಕೊಂಡಿದ್ದಾನೆ.
ಆದರೆ ಪಾಲಕರ ಒತ್ತಡ ಮಾತ್ರವಲ್ಲ, ಆತ ಆನ್ ಲೈನ್ ಆಟವೊಂದಕ್ಕೆ ದಾಸನಾಗಿದ್ದ. ಅದಕ್ಕೆ ಅಡಿಕ್ಟ್ ಆಗಿದ್ದ. ಅದೇ ಕಾರಣಕ್ಕೆ ತರಗತಿಗೂ ಬಂಕ್ ಹಾಕುತ್ತಿದ್ದ ಎನ್ನಲಾಗಿದೆ. ಇದಕ್ಕೆ ಮನೆಯವರು ವಿರೋಧಿಸಿದ್ದರಿಂದ ಅವರನ್ನು ಹತ್ಯೆಗೈದಿದ್ದ.












Click it and Unblock the Notifications