Breaking: ಸುನಂದಾ ಪುಷ್ಕರ್ ಸಾವಿನ ಪ್ರಕರಣ; ಶಶಿ ತರೂರ್ ಆರೋಪಮುಕ್ತಗೊಳಿಸಿ ಆದೇಶ
ನವದೆಹಲಿ, ಆಗಸ್ಟ್ 18: ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಆರೋಪಮುಕ್ತಗೊಳಿಸಿ ದೆಹಲಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ದೆಹಲಿಯ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಶಶಿ ತರೂರ್ ಅವರನ್ನು ಆರೋಪಮುಕ್ತಗೊಳಿಸಿದೆ.

ಸತತ ಐದನೇ ಬಾರಿ ತೀರ್ಪು ಮುಂದೂಡಿದ್ದ ದೆಹಲಿಯಲ್ಲಿರುವ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯ ಬುಧವಾರ ಅಂತಿಮ ತೀರ್ಪು ಪ್ರಕಟಿಸಿದೆ.
— Shashi Tharoor (@ShashiTharoor) August 18, 2021
ನ್ಯಾಯಾಧೀಶರಿಗೆ ಧನ್ಯವಾದ; ಶಶಿ ತರೂರ್ ಟ್ವೀಟ್
ನ್ಯಾಯಾಲಯದ ಈ ಆದೇಶಕ್ಕೆ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ. "ದೆಹಲಿ ಪೊಲೀಸರ ಆರೋಪದಿಂದ ನನ್ನನ್ನು ಮುಕ್ತಗೊಳಿಸಿದ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರಿಗೆ ನನ್ನ ಧನ್ಯವಾದಗಳು. ನನ್ನ ಪತ್ನಿ ಸುನಂದಾ ಪುಷ್ಕರ್ ಸಾವಿನ ಕುರಿತು ದೀರ್ಘಕಾಲದಿಂದ ನಡೆಯುತ್ತಿದ್ದ ಪ್ರಕರಣದಲ್ಲಿ ನಾನು ಆರೋಪ ಮುಕ್ತ ಎಂದು ಅಂತಿಮ ತೀರ್ಪು ದೊರೆತಿದೆ. ಎಲ್ಲಾ ರೀತಿಯ ವಿಚಾರಣೆಗೂ ನಾನು ತಾಳ್ಮೆಯಿಂದ ಸಹಕರಿಸಿದ್ದೇನೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ನನ್ನ ನಂಬಿಕೆ ಸುಳ್ಳಾಗಲಿಲ್ಲ. ಕೊನೆಗೆ ನನಗೆ ನ್ಯಾಯ ದೊರೆತಿದೆ. ಸುನಂದಾ ಪುಷ್ಕರ್ ಆತ್ಮಕ್ಕೆ ಶಾಂತಿ ಕೋರಲು ನಮ್ಮ ಕುಟುಂಬಕ್ಕೆ ನಮಗೆ ಅವಕಾಶ ಕೊಟ್ಟಿದೆ. ನನ್ನ ಪರ ವಾದಿಸಿದ ವಕೀಲರಿಗೆ, ವಿಶೇಷವಾಗಿ ವಿಕಾಸ್ ಪಾಹ್ವ ಮತ್ತು ಗೌರವ್ ಗುಪ್ತಾ ಅವರಿಗೆ ಧನ್ಯವಾದಗಳು" ಎಂದು ಪತ್ರವನ್ನು ಟ್ವೀಟ್ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: 2014ರ ಜನವರಿಯಲ್ಲಿ ನವದೆಹಲಿಯ ಪಂಚತಾರಾ ಹೋಟೆಲ್‌ನ ಕೋಣೆಯೊಂದರಲ್ಲಿ ಸುನಂದಾ ಶವವಾಗಿ ಪತ್ತೆಯಾಗಿದ್ದರು. ಶಶಿ ತರೂರ್ ಅವರ ಅಧಿಕೃತ ಬಂಗಲೆ ನವೀಕರಣ ನಡೆಯುತ್ತಿದ್ದುದರಿಂದ ದಂಪತಿ ಹೋಟೆಲ್‌ನಲ್ಲಿ ತಂಗಿದ್ದರು. ಇದನ್ನು ಆಧರಿಸಿ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.
ದೆಹಲಿ ಪೊಲೀಸರು ಸೆಕ್ಷನ್ 498 ಎ (ಕ್ರೌರ್ಯ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಅಥವಾ ಪರ್ಯಾಯವಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪಗಳನ್ನು ನಿಗದಿಪಡಿಸುವಂತೆ ನ್ಯಾಯಾಲಯವನ್ನು ಕೋರಿದ್ದರು.
ವಿಷದಿಂದ ಹಾಗೂ ಅಲ್‌ಪ್ರಾಕ್ಸ್ ಸೇವನೆಯಿಂದಾಗಿ ಆಕೆ ಸಾವನ್ನಪ್ಪಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ವಾದಿಸಿದ್ದರು. ಆದರೆ ಆಕ್ಷೇಪಿಸಲಾದ ಔಷಧ ಸುನಂದಾ ದೇಹದಲ್ಲಿ ಪತ್ತೆಯಾಗಿಲ್ಲ ಎಂದು ವಿಧಿ ವಿಜ್ಞಾನ ವರದಿಗಳು ಹೇಳುತ್ತಿರುವುದಾಗಿ ಹಿರಿಯ ವಕೀಲ ವಿಕಾಸ್ ಪಹ್ವಾ ತಿಳಿಸಿದ್ದರು.
ಸುನಂದಾ ಪುಷ್ಕರ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರಿಗೆ 2018ರ ಜುಲೈ 5 ರಂದು ಜಾಮೀನು ಮಂಜೂರಾಗಿತ್ತು. ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಶಶಿ ತರೂರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಸುನಂದಾ ಪುಷ್ಕರ್ ಸಾವು ಆತ್ಮಹತ್ಯೆಯೂ ಅಲ್ಲ, ಹತ್ಯೆಯೂ ಅಲ್ಲ ಎಂದು ಪುರಾವೆಗಳು ಖಚಿತಪಡಿಸಿವೆ. ಹಾಗಾಗಿ ತಮ್ಮ ವಿರುದ್ಧವಿರುವ ಆರೋಪ ಕೈಬಿಡುವಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಮನವಿ ಮಾಡಿದ್ದರು. ತರೂರ್ ವಿರುದ್ಧ ಐಪಿಸಿ ಸೆಕ್ಷನ್ 498ಎ ಹಾಗೂ ಐಪಿಸಿ 306 ಸಾಬೀತಾಗಲು ಯಾವುದೇ ಸಾಕ್ಷಿಗಳಿಲ್ಲ. ಸುನಂದಾ ಸಾವನ್ನು ಆಕಸ್ಮಿಕವೆಂದು ಪರಿಗಣಿಸಬೇಕು ಎಂದು ವಕೀಲರು ವಾದಿಸಿದ್ದರು.
ಇದೀಗ ಶಶಿ ತರೂರ್ ಅವರನ್ನು ದೆಹಲಿಯ ವಿಶೇಷ ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.












Click it and Unblock the Notifications