ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ 5 ಮೆಟ್ರಿಕ್ ಟನ್ ಆಕ್ಸಿಜನ್
ನವದೆಹಲಿ, ಏಪ್ರಿಲ್ 25: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾವೈರಸ್ ರೋಗಿಗಳ ಜೀವ ಉಳಿಸುವ ಆಮ್ಲಜನಕ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದರ ಮಧ್ಯೆ ಶನಿವಾರ ರಾತ್ರಿ ಸರ್ ಗಂಗಾರಾಮ್ ಆಸ್ಪತ್ರೆಗೆ ಐದು ಮೆಟ್ರಿಕ್ ಟನ್ ಆಕ್ಸಿಜನ್ ಸಿಲಿಂಡರ್ ಸರಬರಾಜು ಮಾಡಲಾಗಿದೆ.
ಶನಿವಾರ ರಾತ್ರಿ 10.30ಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿ ಇನ್ನೊಂದು ಗಂಟೆಯಲ್ಲಿ ಆಕ್ಸಿಜನ್ ಖಾಲಿ ಆಗಲಿದೆ ಎಂಬ ಎಚ್ಚರಿಕೆ ಗಂಟೆ ಹೊಡೆದುಕೊಳ್ಳುವುದಕ್ಕೆ ಆರಂಭವಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ 130 ರೋಗಿಗಳಿದ್ದರೆ, ಈ ಪೈಕಿ 30 ರೋಗಿಗಳು ವೆಂಟಿಲೇಟರ್ ಸಹಾಯದಿಂದಲೇ ಉಸಿರಾಡುತ್ತಾ ಗಂಭೀರ ಸ್ಥಿತಿಯಲ್ಲಿದ್ದರು.
ಸ್ಥಳೀಯ ಶಾಸಕ ರಾಘವ್ ಚಾಧಾ ನೆರವಿನಿಂದ ಮಧ್ಯರಾತ್ರಿ 12.20ಕ್ಕೆ ಒಂದು ಮೆಟ್ರಿಕ್ ಟನ್ ಆಕ್ಸಿಜನ್ ತುಂಬಿಕೊಂಡ ಟ್ಯಾಂಕರ್ ಆಸ್ಪತ್ರೆ ತಲುಪಿತು. ಎರಡು ಗಂಟೆಗಳಲ್ಲಿ ಆಕ್ಸಿಜನ್ ಪ್ರಮಾಣವೆಲ್ಲ ಖಾಲಿ ಆಗಲಿತ್ತು ಎಂದು ಆಸ್ಪತ್ರೆ ವಕ್ತಾರರು ತಿಳಿಸಿದ್ದಾರೆ.

ಬೆಳಗ್ಗೆ 4.15ರ ವೇಳೆಗೆ 5 ಮೆಟ್ರಿಕ್ ಟನ್ ಆಕ್ಸಿಜನ್:
ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ಫರಿದಾಬಾದ್ ಪ್ರಾಥಮಿಕ ಆಮ್ಲಜನಕ ಉತ್ಪಾದನಾ ಕೇಂದ್ರದಿಂದ ಆಕ್ಸಿಜನ್ ಸರಬರಾಜು ಮಾಡಲಾಗುತ್ತದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಒಂದು ಟ್ಯಾಂಕರ್ ಆಸ್ಪತ್ರೆಗೆ ತಲುಪಿದರೆ, 4.15ರ ವೇಳೆಗೆ ಐದು ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ಹೊತ್ತ ಟ್ಯಾಂಕರ್ ಗಳು ಆಸ್ಪತ್ರೆಗೆ ತಲುಪಿದವು. ಈಗಿರುವ ಆಕ್ಸಿಜನ್ ಒತ್ತಡದ ಮಧ್ಯೆ ಪ್ರತಿ 11 ರಿಂದ 12 ಗಂಟೆಗಳಲ್ಲಿ ಆಕ್ಸಿಜನ್ ಖಾಲಿ ಆಗುತ್ತಿದೆ ಎಂದು ಆಸ್ಪತ್ರೆ ವಕ್ತಾರರು ತಿಳಿಸಿದ್ದಾರೆ. ಮೂರು ದಿನಗಳಿಗೆ ಒಂದು ಬಾರಿ ಆಸ್ಪತ್ರೆಯಲ್ಲಿ ಖಾಲಿ ಆಗುವ ಆಮ್ಲಜನಕವನ್ನು ಮತ್ತೆ ತುಂಬಿಸಲಾಗುತ್ತದೆ.
ದೆಹಲಿಯಲ್ಲಿ ಮುಂದುವರಿದ ಆಮ್ಲಜನಕ ಅಭಾವ:
ರಾಷ್ಟ್ರ ರಾಜಧಾನಿಯ ಹಲವು ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರದ ಸಹಾಯದಿಂದ ತುರ್ತಾಗಿ ಆಕ್ಸಿಜನ್ ಸರಬರಾಜು ಮಾಡುತ್ತಿದ್ದರೂ ಸಹ ಆಮ್ಲಜನಕದ ಅಭಾವ ಎದ್ದು ಕಾಣುತ್ತಿದೆ. ಕೆಲವು ಆಸ್ಪತ್ರೆಗಳು ಈ ಸವಾಲು ಎದುರಿಸುವುದಕ್ಕೆ ತಾತ್ಕಾಲಿಕ ಮಾರ್ಗಗಳನ್ನು ಕಂಡುಕೊಂಡಿವೆ. ಆದರೆ ಆಕ್ಸಿಜನ್ ಸಮಸ್ಯೆಯಿಂದಾಗಿ ಶನಿವಾರ ದೆಹಲಿಯ ಎರಡು ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸುವಂತೆ ಸಂಬಂಧಿಕರಿಗೆ ಹೇಳಿವೆ. ರೋಹಿಣಿ ಅಲ್ಲಿರುವ ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ತುಘಲಕಬಾದ್ ಇನ್ಸ್ ಟಿಟ್ಯೂಟ್ ಪ್ರದೇಶದ ಬತ್ರಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ತೀವ್ರವಾಗಿ ಕಾಡುತ್ತಿದೆ.












Click it and Unblock the Notifications