'ದೇಶವಿರೋಧಿ' ಕಾರ್ಯಕ್ರಮ; ಕನ್ಹಯ್ಯಾ ವಿರುದ್ಧ 1200 ಪುಟದ ಆರೋಪ ಪಟ್ಟಿ
ನವದೆಹಲಿ, ಜನವರಿ 14: ಜೆಎನ್ ಯು ವಿದ್ಯಾರ್ಥಿ ಒಕ್ಕೂಟದ ಮಾಜಿ ಮುಖಂಡ ಕನ್ಹಯ್ಯಾ ಕುಮಾರ್, ಉಮರ್ ಖಾಲೀದ್ ಮತ್ತು ಇತರ ಎಂಟು ಮಂದಿ ವಿರುದ್ಧ 'ದೇಶವಿರೋಧಿ' ಕಾರ್ಯಕ್ರಮ ಆಯೋಜಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರ ರೋಪ ಪಟ್ಟಿ ದಾಖಲಿಸಲಾಗಿದೆ.
ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯಲ್ಲಿ 2016ರ ಫೆಬ್ರವರಿಯಲ್ಲಿ ದೇಶದ್ರೋಹಿ ಕಾರ್ಯಕ್ರಮ ಆಯೋಜಿಸಿದ್ದ ಆರೋಪ ಅವರ ಮೇಲಿತ್ತು. ಮಾಜಿ ವಿದ್ಯಾರ್ಥಿ ಮುಖಂಡರಾದ ಕನ್ಹಯ್ಯಾ ಕುಮಾರ್, ಉಮರ್ ಖಾಲೀದ್, ಅನಿರ್ಬನ್ ಭಟ್ಟಾಚಾರ್ಯ ಮತ್ತು ಇತರ ಏಳು ಮಂದಿ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳ ವಿರುದ್ಧ ನಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಪೊಲೀಸರು ಹೇಳಿದ್ದಾರೆ.
ಭಾರತದ ಸಂಸತ್ ಮೇಲೆ ನಡೆದ ಉಗ್ರಗಾಮಿಗಳ ದಾಳಿಯ ಮಾಸ್ಟರ್ ಮೈಂಡ್ ಅಫ್ಜಲ್ ಗುರುವನ್ನು ನೇಣಿಗೆ ಹಾಕಿದ್ದರ ವಿರುದ್ಧ ಕಾಲೇಜು ಕ್ಯಾಂಪಸ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂಬುದು ಆರೋಪ. ಆ ನಂತರ ವಿದ್ಯಾರ್ಥಿ ಮುಖಂಡರನ್ನು ಬಂಧಿಸಲಾಯಿತು. ಆ ಸಂದರ್ಭದಲ್ಲಿ, ಆಡಳಿತಾರೂಢ ಬಿಜೆಪಿ ಪರವಾಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದವು.

ಸಿಪಿಐ ನಾಯಕರಾದ ಡಿ.ರಾಜಾರ ಮಗಳು ಅಪರಾಜಿತಾ ಸೇರಿದಂತೆ ಮೂವತ್ತಾರು ಮಂದಿ ಇತರ ಆರೋಪಿಗಳ ವಿರುದ್ಧ ನೇರ ಸಾಕ್ಷ್ಯ ಇಲ್ಲ. ಆದರೆ ಪ್ರಶ್ನಿಸುವ ಸಲುವಾಗಿ ಅವರನ್ನು ಕರೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣ ಅಂತಿಮ ಹಂತದಲ್ಲಿದೆ. ಬೇರೆ ರಾಜ್ಯಗಳಿಗೆ ಭೇಟಿ ನೀಡಿ, ಹೇಳಿಕೆ ಪಡೆಯಬೇಕಿರುವುದರಿಂದ ವಿಚಾರಣೆ ಸಂಕೀರ್ಣವಾಗಿದೆ ಎಂದು ದೆಹಲಿ ಪೊಲೀಸ್ ಕಮಿಷನರ್ ಅಮೂಲ್ಯ ಪಟ್ನಾಯಕ್ ಕಳೆದ ವಾರ ಹೇಳಿದ್ದಾರೆ.
1200 ಪುಟಗಳ ಆರೋಪಪಟ್ಟಿ ಸಿದ್ಧವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕನ್ಹಯ್ಯಾ ಕುಮಾರ್, ಇದು ರಾಜಕೀಯ ಪ್ರೇರಿತ. ಆರೋಪ ಪಟ್ಟಿ ದಾಖಲಾಗಿರುವುದು ಒಂದು ವೇಳೆ ನಿಜವಾದರೆ ಪೊಲೀಸರು ಹಾಗೂ ಮೋದಿ ಜೀಗೆ ಧನ್ಯವಾದ ಹೇಳ್ತೀನಿ. ಮೂರು ವರ್ಷಗಳ ನಂತರ, ಚುನಾವಣೆ ಎದುರಿಗೆ ಇರುವಾಗ ಆರೋಪ ಪಟ್ಟಿ ಸಲ್ಲಿಸಿರುವುದು ಸ್ಪಷ್ಟವಾಗಿ ತೋರಿಸುತ್ತದೆ: ಇದು ರಾಜಕೀಯ ಪ್ರೇರಿತ. ನಮ್ಮ ದೇಶದ ನ್ಯಾಯಾಂಗದ ಬಗ್ಗೆ ನನಗೆ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications