ಏರ್ ಇಂಡಿಯಾ ಬಂಡವಾಳ ಹಿಂತೆಗೆತ: ಸುಬ್ರಮಣಿಯನ್ ಸ್ವಾಮಿ ಅರ್ಜಿ ತಿರಸ್ಕೃತ
ನವದೆಹಲಿ, ಜನವರಿ 07: ಏರ್ ಇಂಡಿಯಾ ಬಂಡವಾಳ ಹಿಂತೆಗೆತ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಿ ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದ ಅರ್ಜಿಯನ್ನು ಹೈಕೋರ್ಟ್ ತಿರಸ್ಕಾರ ಮಾಡಿದೆ.
ಏರ್ ಇಂಡಿಯಾದ ಮೇಲೆ ಹೂಡಿಕೆಯನ್ನು ಕೇಂದ್ರ ಸರ್ಕಾರವು ಹಿಂದಕ್ಕೆ ಪಡೆಯುವುದು ರಾಷ್ಟ್ರದ್ರೋಹದ ಕಾರ್ಯವಾಗಿದೆ, ಈ ಬಂಡವಾಳ ಹಿಂತೆಗೆತವನ್ನು ರದ್ದು ಮಾಡಬೇಕು ಎಂದು ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ದೆಹಲಿ ಹೈಕೋರ್ಟ್‌ನ ನ್ಯಾಯಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್, ನ್ಯಾ. ಜ್ಯೋತಿ ಸಿಂಗ್ ಅರ್ಜಿಯ ವಿಚಾರಣೆಯ ಆದೇಶವನ್ನು ಗುರುವಾರ ನೀಡುವುದಾಗಿ ಹೇಳಿದ್ದು, ಗುರುವಾರ ಈ ಅರ್ಜಿಯನ್ನು ಈ ದ್ವಿಸದಸ್ಯ ಪೀಠವು ರದ್ದು ಮಾಡಿದೆ.
ಏರ್ ಇಂಡಿಯಾದ ಮೇಲೆ ಹೂಡಿಕೆಯನ್ನು ಕೇಂದ್ರ ಸರ್ಕಾರವು ಹಿಂದಕ್ಕೆ ಪಡೆಯುವುದು ರಾಷ್ಟ್ರದ್ರೋಹದ ಕಾರ್ಯವಾಗಿದೆ ಎಂದು ಹೇಳಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಏರ್ ಇಂಡಿಯಾದಿಂದ ಬಂಡವಾಳವನ್ನು ಹಿಂದಕ್ಕೆ ಪಡೆಯುವ ಒಪ್ಪಂದವನ್ನು ಅಮಾನತು ಮಾಡುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.

ಈ ಖಾಸಗೀಕರಣದ ಪ್ರಕ್ರಿಯೆಯ ಬಗ್ಗೆ ಪ್ರತಿವಾದಿಗಳ ಪಾತ್ರದ ಬಗ್ಗೆ ತನಿಖೆಯನ್ನು ನಡೆಸಬೇಕು. ಅದರ ಬಗ್ಗೆ ನ್ಯಾಯಾಲಯದ ಮುಂದೆ ವರದಿ ಸಲ್ಲಿಕೆ ಮಾಡಬೇಕು ಎಂದು ಕೂಡಾ ಅರ್ಜಿ ಮೂಲಕ ಒತ್ತಾಯ ಮಾಡಿದ್ದರು. ಕಳೆದ ಅಕ್ಟೋಬರ್‌ನಲ್ಲ ಸರ್ಕಾರಿ ಕಂಪನಿ ಎಐಎಸ್‌ಎಟಿಎಸ್‌ನ ಅರ್ಧದಷ್ಟು ಪಾಲಿನೊಂದಿಗೆ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಶೇಕಡ ನೂರರಷ್ಟು ಈಕ್ವಿಟಿ ಷೇರು ಪಡೆಯುವುದಕ್ಕೆ ಟಾಟಾ ಸನ್ಸ್ ಮಾಡಿದ ಅತ್ಯಧಿಕ ಬಿಡ್ ಅನ್ನು ಕೇಂದ್ರ ಸರ್ಕಾರ ಅಂಗೀಕಾರ ಮಾಡಿತ್ತು.
ಸುಬ್ರಮಣಿಯನ್ ಸ್ವಾಮಿ ವಾದವೇನು?
ಏರ್ ಇಂಡಿಯಾ ಕೊಳ್ಳಲು ನಡೆದ ಬಿಡ್ ಟಾಟಾ ಸಮೂಹ ಸಂಸ್ಥೆ ಪಾಲಾಗಿದೆ. ಕಳೆದ ಎರಡು ದಶಕಗಳಲ್ಲಿ ಏರ್ ಇಂಡಿಯಾ ಮೇಲಿನ ಬಂಡವಾಳವನ್ನು ಇದೇ ಮೊದಲ ಬಾರಿಗೆ ಸರ್ಕಾರವು ವಾಪಾಸ್ ಪಡೆದಿದೆ. ಈ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಹಾಗೂ ಖಾಸಗೀಕರಣ ಮಾಡುವುದು ಸರಿಯಲ್ಲ ಎಂದು ಹೇಳಿ ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನು ನಿರಂತರವಾಗಿ ತನ್ನ ಪಕ್ಷದ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸುವ ಸುಬ್ರಮಣಿಯನ್ ಸ್ವಾಮಿ ವಿಚಾರಣೆ ವೇಳೆ ಖುದ್ದಾಗಿ ತಾನೇ ವಾದ ಮಂಡನೆ ಮಾಡಿದ್ದಾರೆ.
"ಈ ಹರಾಜು ಪ್ರಕ್ರಿಯೆಯು ಸಂವಿಧಾನಿಕವಾಗಿಲ್ಲ. ಏರ್ ಇಂಡಿಯಾದ ಮೇಲೆ ಹೂಡಿಕೆಯನ್ನು ಕೇಂದ್ರ ಸರ್ಕಾರವು ಹಿಂದಕ್ಕೆ ಪಡೆಯುವುದು ರಾಷ್ಟ್ರದ್ರೋಹದ ಕಾರ್ಯವಾಗಿದೆ. ಈ ಕಾರ್ಯವು ಕೆಟ್ಟ ಉದ್ದೇಶವನ್ನು ಹೊಂದಿದೆ. ಇದರಲ್ಲಿ ಭ್ರಷ್ಟಾಚಾರವಿದೆ. ಟಾಟಾ ಪರವಾಗಿ ಸರ್ಕಾರವು ಹೊಂದಾಣಿಕೆ ಮಾಡಿಕೊಂಡಿದೆ," ಎಂದು ಆರೋಪ ಮಾಡಿದ್ದಾರೆ.
"ಮದ್ರಾಸ್ ಹೈಕೋರ್ಟ್‌ನಲ್ಲಿ ಸ್ಪೈಸ್‌ಜೆಟ್ ವಿರುದ್ಧ ದಿವಾಳಿತನದ ಪ್ರಕರಣದ ವಿಚಾರಣೆ ಬಾಕಿ ಇದೆ. ಅದು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹವಾಗಿಲ್ಲ. ಆದರೆ ಸ್ಪೈಸ್‌ಜೆಟ್ ಮಾಲೀಕರ ನೇತೃತ್ವದ ಒಕ್ಕೂಟ ಈ ಬಿಡ್‌ದಾರರಾಗಿದ್ದಾರೆ. ಅಂದರೆ ಓರ್ವ ಬಿಡ್‌ದಾರ ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, ಈ ರೀತಿಯಾಗಿ ಬಿಡ್ ನಡೆಸಲು ಸಾಧ್ಯವಿಲ್ಲ," ಎಂದು ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ವಾದ ಮಾಡಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಾಡಿದ್ದರೆ, ಟಾಟಾ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಾಡಿದ್ದಾರೆ. ಸರ್ಕಾರದ ಪರವಾಗಿ ವಾದ ಮಾಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಹಣವನ್ನು ಹಿಂದಕ್ಕೆ ಪಡೆಯುವುದು ಸರ್ಕಾರದ ನೀತಿ ನಿರ್ಧಾರವಾಗಿದೆ. ಅದನ್ನು ಕೋರ್ಟ್‌ನಲ್ಲಿ ಪ್ರಶ್ನೆ ಮಾಡುವಂತಿಲ್ಲ," ಎಂದು ಹೇಳಿದ್ದಾರೆ.












Click it and Unblock the Notifications