ಅಕ್ಬರ್ ಹೂಡಿದ್ದ ಮಾನನಷ್ಟ ಮೊಕದ್ದಮೆಯಿಂದ ರಮಣಿಗೆ ಖುಲಾಸೆ
ನವದೆಹಲಿ, ಫೆಬ್ರವರಿ 17: ಕೇಂದ್ರದ ಮಾಜಿ ಸಚಿವ, ಮಾಜಿ ಸಂಪಾದಕ ಎಂಜೆ ಅಕ್ಬರ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಹತ್ವ ಪಾತ್ರ ವಹಿಸಿದ್ದ ಪತ್ರಕರ್ತೆ ಪ್ರಿಯಾ ರಮಣಿಗೆ ಮಾನನಷ್ಟ ಮೊಕದ್ದಮೆಯಿಂದ ಖುಲಾಸೆ ಸಿಕ್ಕಿದೆ. ಇದಕ್ಕೂ ಮುನ್ನ ದೆಹಲಿಯ ಪಟಿಯಾಲ ಕೋರ್ಟಿನಿಂದ ಜಾಮೀನು ಮಂಜೂರಾಗಿತ್ತು.
ಎಂಜೆ ಅಕ್ಬರ್ ಅವರೊಂದಿಗೆ ಈ ಹಿಂದೆ ಸಹದ್ಯೋಗಿಯಾಗಿದ್ದ ಪ್ರಿಯಾ ರಮಣಿ ಎಂಬುವರು ಮೊದಲಿಗೆ ಟ್ವಿಟ್ಟರ್‌ನಲ್ಲಿ #metoo ಅಭಿಯಾನದ ಅಡಿ ಎಂಜೆ ಅಕ್ಬರ್ ಅವರ ಕಾಮಚೇಷ್ಟೆಗಳ ಬಗ್ಗೆ ವಿವರವಾಗಿ ಬರೆದುಕೊಂಡಿದ್ದರು.
ಟೆಲಿಗ್ರಾಫ್, ಏಷ್ಯನ್ ಏಜ್, ದಿ ಸಂಡೇ ಗಾರ್ಡಿಯನ್ ಮುಂತಾದ ಪ್ರತಿಷ್ಠಿತ ಪತ್ರಿಕೆಗಳ ಸಂಪಾದಕರಾಗಿದ್ದ ಎಂಜೆ ಅಕ್ಬರ್ ಅವರು ಭಾರತೀಯ ಜನತಾ ಪಕ್ಷ ಸೇರಿದ್ದರು. ರಾಜ್ಯಸಭಾ ಸದಸ್ಯರಾದ ಅಕ್ಬರ್ ಅವರು ನಂತರ ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. 20ಕ್ಕೂ ಅಧಿಕ ಪತ್ರಕರ್ತೆಯರು ಆರೋಪ ಮಾಡಿದ ಬಳಿಕ, ತೀವ್ರ ಒತ್ತಡಕ್ಕೆ ಒಳಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಕಾನೂನು ಹೋರಾಟ ನಡೆಸಿದ್ದರು. ತಮ್ಮ ವಿರುದ್ಧ ಆರೋಪ ಮಾಡಿದ್ದ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ
ಅಕ್ಬರ್ ವಿರುದ್ಧ 20ಕ್ಕೂ ಅಧಿಕ ಪತ್ರಕರ್ತೆಯರು ಆರೋಪ ಹೊರೆಸಿದ್ದರು. ದೂರು ದಾಖಲಿಸಿ, ಪೊಲೀಸರ ಮುಂದೆ ಹೇಳಿಕೆ ನೀಡಿದವರು ಕಡಿಮೆ. ಪತ್ರಕರ್ತೆ ಪ್ರಿಯಾ ರಮಣಿ ಅವರು ಮುಂಚೂಣಿಯಲ್ಲಿದ್ದರು. 20 ವರ್ಷಗಳ ಕಾಲ ಕಿರುಕುಳ ಅನುಭವಿಸಿದೆ ಎಂದು ರಮಣಿ ಹೇಳಿಕೊಂಡಿದ್ದರು. ರಮಣಿ ವಿರುದ್ಧ ಅಕ್ಬರ್ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಭಾರತೀಯ ದಂಡ ಸಂಹಿತೆಯ 499 ಸೆಕ್ಷನ್ ಅಡಿಯಲ್ಲಿ ಆರೋಪಿ (ಪ್ರಿಯಾ ರಮಣಿ) ವಿರುದ್ಧ ಸೂಕ್ತ ವಿಚಾರಣೆ ನಡೆಸಿ, ಕ್ರಮ ಜರುಗಿಸಬೇಕು, ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅಕ್ಬರ್ ಅವರು ನ್ಯಾಯಾಲಯವನ್ನು ಕೋರಿದ್ದರು.

ಹಲವು ಮೀಟೂ ಪ್ರಕರಣಗಳು ಬೆಳಕಿಗೆ ಬಂದವು
ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ನಂತರ, ಪ್ರಮುಖ ರಾಷ್ಟ್ರೀಯ ದೈನಿಕ ಹಿಂದೂಸ್ತಾನ್ ಟೈಮ್ಸ್ ನ ರಾಜಕೀಯ ವಿಭಾಗದ ಸಂಪಾದಕ, ಮುಖ್ಯ ಬ್ಯೂರೋ ಪ್ರಶಾಂತ್ ಝಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಎಡಿಟರ್ ಕೆಆರ್ ಶ್ರೀನಿವಾಸನ್ ವಿರುದ್ಧ ಪತ್ರಕರ್ತೆ ಸಂಧ್ಯಾ ಮೆನನ್ ಏಳು ಮಂದಿ ಮಹಿಳೆಯರು ಆರೋಪಿಸಿದ್ದಾರೆ. ನಾನಾ ಪಾಟೇಕರ್, ಚಿತ್ರಕರ್ಮಿ ವಿಕಾಸ್ ಬೆಹ್ಲ್, ಲೇಖಕ ಚೇತನ್ ಭಗತ್, ಕಾಮಿಕ್ ಉತ್ಸವ್ ಚಕ್ರವರ್ತಿ, ನಟ ರಜತ್ ಕಪೂರ್ ಅವರಿಗೆ #metoo ಅಭಿಯಾನದ ಬಿಸಿ ತಟ್ಟಿದೆ.

ಅಕ್ಬರ್ ಚೇಷ್ಟೆಗಳನ್ನು ವಿವರವಾಗಿ ಬರೆದಿದ್ದ ರಮಣಿ
ಅಕ್ಬರ್ ವಿರುದ್ಧ ಮೊದಲ ಬಾರಿ ದನಿಯೆತ್ತಿದ್ದ ಪ್ರಿಯಾ ರಮಣಿ ಅವರು, ಅಕ್ಬರ್ ವಿರುದ್ಧ ನಾವು ಯಾರೂ ಷಡ್ಯಂತ್ರ ಮಾಡಿಲ್ಲ, ಅವರಂತೆ ನಮಗ್ಯಾರಿಗೂ ರಾಜಕೀಯ ಮಹತ್ವಾಕಾಂಕ್ಷೆಗಳಿಲ್ಲ. ನಾವು ನಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನವನ್ನು ಪಣಕ್ಕಿಟ್ಟು ಅವರು ಎಸಗಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದೇವೆ. ಯಾವುದೇ ಮಾನನಷ್ಟ ಮೊಕದ್ದಮೆಯಾಗಲಿ ಸತ್ಯವೇ ನಮ್ಮ ಬಲವಾದ ರಕ್ಷಣಾ ಅಸ್ತ್ರ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವರು ಒಂದು ವರ್ಷದ ಹಿಂದೆಯೇ ಎಂಜೆ ಅಕ್ಬರ್ ಅವರ ಹೆಸರನ್ನು ಪ್ರಸ್ತಾಪಿಸದೆ ವೋಗ್ ಮ್ಯಾಗಜೀನ್ ನಲ್ಲಿ ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ವಿಸ್ತೃತವಾಗಿ ಬರೆದಿದ್ದರು. ಪ್ರಿಯಾ ರಮಣಿಯನ್ನು ಸಂದರ್ಶನಕ್ಕೆಂದೆ ಹೋಟೆಲಿಗೆ ಕರೆದಿದ್ದಲ್ಲದೆ, ಅವರು ಮದ್ಯವನ್ನು ತೆಗೆದುಕೊಳ್ಳಲು ಒತ್ತಾಯಿಸಿ, ರೋಮ್ಯಾಂಟಿಕ್ ಹಾಡನ್ನು ಹಾಡುತ್ತ ಅವರನ್ನು ಪಲ್ಲಂಗದ ಮೇಲೆ ತಮ್ಮ ಪಕ್ಕದ ಕೂಡಬೇಕೆಂದು ಒತ್ತಾಯಿಸಿದ್ದರು.

ಆರೋಪ ಅಲ್ಲಗೆಳೆದಿರುವ ಅಕ್ಬರ್
ಮೊದಲಿಗೆ ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳು ಆಧಾರರಹಿತವಾದದ್ದವು, ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದ ಎಂಜೆ ಅಕ್ಬರ್ ನಂತರ ತೀವ್ರ ಒತ್ತಡಕ್ಕೆ ಒಳಗಾಗಿ, ಕಾನೂನು ಹೋರಾಟ ಮಾಡುವ ಉದ್ದೇಶದಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರು. ಪ್ರಿಯಾ ರಮಣಿಯವರು ಹೇಳಿರುವ ಪ್ರಕಾರ, ನಾನು ಏನನ್ನೂ ಮಾಡಿಯೇ ಇಲ್ಲ, ಅಂದರೆ ಯಾವುದೇ ಲೈಂಗಿಕ ದೌರ್ಜನ್ಯ ಎಸಗಿಯೇ ಇಲ್ಲ. ಅದನ್ನು ಅವರೇ ಅವರ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಲ್ಲದೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು ಅಕ್ಬರ್. ಪ್ರಿಯಾ ರಮಣಿ ಅವರು ಮಾಡಿದ ಟ್ವೀಟ್ ನಲ್ಲಿ, ಅವರನ್ನು ನನ್ನ ಕಥೆಯಲ್ಲಿ ಹೆಸರಿಸಿರಲಿಲ್ಲ, ಏಕೆಂದರೆ ಅವರು ನನಗೆ 'ಏನೂ ಮಾಡಿರಲಿಲ್ಲ'. ಆದರೆ, ಇನ್ನೂ ಹಲವಾರು ಮಹಿಳೆಯರ ಬಳಿ ಅಸಹ್ಯಕರ ಕಥೆಗಳಿವೆ ಎಂದಿದ್ದರು.












Click it and Unblock the Notifications