ಆರೋಪಿಯನ್ನೇ ಒತ್ತೆ ಇಟ್ಟ ಪೊಲೀಸರು: ಕೋಟಿ ಕೋಟಿಗೆ ಬ್ಲ್ಯಾಕ್ ಮೇಲ್
ನವದೆಹಲಿ, ಡಿ 6: ಬೇಲಿಯೇ ಎದ್ದು ಹೊಲ ಮೇಯ್ದಂತೆ, ರಕ್ಷಣೆ ಕೊಡಬೇಕಾದ ಪೊಲೀಸರೇ, ಆರೋಪಿಯೊಬ್ಬನನ್ನು ಒತ್ತೆ ಇಟ್ಟುಕೊಂಡು, ಕೋಟ್ಯಾಂತರ ರೂಪಾಯಿಗೆ ಡಿಮಾಂಡ್ ಮಾಡಿದ ಘಟನೆ, ರಾಷ್ಟ್ರ ರಾಜಧಾನಿಯಿಂದ ವರದಿಯಾಗಿದೆ.
ವಂಚನೆ ಆರೋಪದಡಿ, ದೆಹಲಿ ಪೊಲೀಸರು ಚಂಡೀಗಢದ ಆರು ಜನರ ಮೇಲೆ ಕೇಸ್ ದಾಖಲಿಸಿಕೊಂಡಿದ್ದರು. ಇದರಲ್ಲಿ ಐವರನ್ನು ಬಂಧಿಸಿ, ಇನ್ನೊಬ್ಬನ ಹುಡುಕಾಟದಲ್ಲಿ ತೊಡಗಿದ್ದರು.
ಪ್ರಧಾನ್ ಎನ್ನುವ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು, ಆತನನ್ನು ಠಾಣೆಗೆ ಕರೆದುಕೊಂಡು ಬರದೇ, ದೆಹಲಿಯ ಉತ್ತಮ್ ನಗರದ ಪ್ರದೇಶದಲ್ಲಿ ಒತ್ತೆಯಿಟ್ಟುಕೊಂಡು, ಆತನ ಪತ್ನಿಗೆ ಕರೆಮಾಡಿ ಒಂದೂವರೆ ಕೋಟಿ ರೂಪಾಯಿ ಹಣದ ಬೇಡಿಕೆಯನ್ನು ಇಟ್ಟಿದ್ದಾರೆ.

ಬೇಡಿಕೆಯಿಟ್ಟ ಹಣ ನೀಡದೇ ಹೋದರೆ ಮತ್ತು ಈ ವಿಷಯವನ್ನು ಎಲ್ಲಾದರೂ ಬಹಿರಂಗ ಪಡಿಸಿದರೆ, ಸುಳ್ಳುಕೇಸ್ ಹಾಕಿ, ಜೈಲಿನಲ್ಲೇ ಕಳೆಯುವಂತೆ ಮಾಡುತ್ತೇವೆ ಎಂದು ಪ್ರಧಾನ್ ಪತ್ನಿಗೆ, ಮೂವರು ಪೊಲೀಸರು ಬೆದರಿಕೆಯನ್ನು ಹಾಕಿದ್ದಾರೆ.
ತಮ್ಮ ಸಹದ್ಯೋಗಿಗಳೇ ಮಣ್ಣು ತಿನ್ನುವ ಕೆಲಸವನ್ನು ಮಾಡಿದ್ದಾರೆ ಎನ್ನುವುದನ್ನು ಅರಿತ ಹಿರಿಯ ಪೊಲೀಸ್ ಅಧಿಕಾರಿಗಳು, ಆರೋಪಿಯನ್ನು ಒತ್ತೆಯಿಟ್ಟುಕೊಂಡಿದ್ದ ರಣಹಾಲ್ ಠಾಣೆಯ ಸುಭೆಸಿಂಗ್, ಇಂದು ಪಾವಟ್ ಮತ್ತು ಅಜಯ್ ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಿದ್ದಾರೆ. ರಣಹಾಲ್ ಠಾಣೆಯ ಸ್ಟೇಷನ್ ಮಾಸ್ಟರ್ ಅವರನ್ನೂ ಅಲ್ಲಿಂದ ವರ್ಗಾಯಿಸಲಾಗಿದೆ.












Click it and Unblock the Notifications