ಸಾವರ್ಕರ್ ಮಕ್ಕಳಿಗೆ ಹೆದರುವುದಿಲ್ಲ: ಬಿಜೆಪಿ ವಿರುದ್ಧ ಅರವಿಂದ್ ಕೇಜ್ರಿವಾಲ್ ಆಕ್ರೋಶ
ನವದೆಹಲಿ, ಜುಲೈ 22: ಮನೀಶ್ ಸಿಸೋಡಿಯಾ ಮೇಲೆ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಆಪ್ ಬೆಳವಣಿಗೆಯನ್ನು ಸಹಿಸದೆ ಬಿಜೆಪಿ ಈ ರೀತಿಯ ಆರೋಪಗಳನ್ನು ಮಾಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮದ್ಯ ಮಾಫಿಯಾ, ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುವ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಆರೋಪಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.
ಸಿಸೋಡಿಯಾ ಮೇಲಿನ ಆರೋಪಗಳು ಸುಳ್ಳು ಎಂದಿರುವ ಕೇಜ್ರಿವಾಲ್, ದೆಹಲಿಯ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಸಿಸೋಡಿಯಾ ದೆಹಲಿಯ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ತುಂಬಾ ಶ್ರಮಿಸುತ್ತಿದ್ದಾರೆ, ಅವರ ಕೆಲಸಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ, ಅವರ ವರ್ಚಸ್ಸು ಹೆಚ್ಚಾಗುವುದನ್ನು ಸಹಿಸದೆ ಕೇಂದ್ರ ಸರ್ಕಾರ ಅವರನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
22 ವರ್ಷಗಳಿಂದ ಸಿಸೋಡಿಯಾ ಅವರನ್ನು ನಾನು ನೋಡಿದ್ದೇನೆ. ಅವರು ತುಂಬಾ ಪ್ರಾಮಾಣಿಕ ವ್ಯಕ್ತಿ ಎಂದರು. ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ಪ್ರಕರಣ ದಾಖಲಸಿದೆ, ಕೆಲವೇ ದಿನಗಳಲ್ಲಿ ಅವರನ್ನು ಬಂಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇದೊಂದು ನಕಲಿ ಪ್ರಕರಣ ಎಂದ ಅವರು ಸಿಸೋಡಿಯಾ ಮೇಲಿನ ಪ್ರಕರಣದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.

ಸಾವರ್ಕರ್ ಮಕ್ಕಳಿಗೆ ಹೆದರಲ್ಲ ಎಂದ ಕೇಜ್ರಿವಾಲ್
ಬಿಜೆಪಿ ನಾಯಕರನ್ನು "ಸಾವರ್ಕರ್ ಮಕ್ಕಳು" ಎಂದು ಕರೆದ ಅವರು, ತಮ್ಮ ಪಕ್ಷದ ನಾಯಕರು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಮಕ್ಕಳು ಎಂದು ಹೇಳಿದರು. ಭಗತ್ ಸಿಂಗ್ ಬ್ರಿಟೀಷರ ಮುಂದೆ ತಲೆಬಾಗಲು ನಿರಾಕರಿಸಿ ಗಲ್ಲಿಗೇರಲು ನಿರ್ಧರಿಸಿದರು. ನಾವೂ ಕೂಡ ಅವರಂತೆಯೇ ಜೈಲಿಗೆ ಹೋಗಲು ನಮಗೆ ಯಾವುದೇ ಭಯವಿಲ್ಲ ಎಂದು ಕೇಜ್ರಿವಾಲ್ ಹೇಳಿದರು.
ದೆಹಲಿಯ ಮಾದರಿ ಅಭಿವೃದ್ಧಿ ಕಾರ್ಯಗಳಿಂದ ಆಪ್ ಜನಪ್ರಿಯತೆ ಪಡೆದಿದೆ. ಚುನಾವಣೆಯಲ್ಲಿ ಯಶಸ್ವಿಯಾಗುತ್ತಿರುವುದು, ಜನಪ್ರಿಯತೆಯನ್ನು ಸಹಿಸದೆ ಆಪ್ ಪಕ್ಷದ ಮೇಲೆ ಬಿಜೆಪಿ ದಾಳಿ ಮಾಡುತ್ತಿದೆ. ಶಾಸಕರನ್ನು ಜೈಲಿಗೆ ಕಳುಹಿಸಲು ಸಂಚು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಸಿಬಿಐ ತನಿಖೆಗೆ ಸಕ್ಸೇನಾ ಶಿಫಾರಸು
ದೆಹಲಿ ಸರ್ಕಾರದ ವಿವಾದಾತ್ಮಕ ಹೊಸ ಅಬಕಾರಿ ನೀತಿಯ ಕುರಿತು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಶಿಫಾರಸು ಮಾಡಿದ್ದಾರೆ. ಮುಖ್ಯ ಕಾರ್ಯದರ್ಶಿ ವರದಿಯನ್ನು ಉಲ್ಲೇಖಿಸಿದ ಅವರು, ಅಬಕಾರಿ ಇಲಾಖೆಯ ಉಸ್ತುವಾರಿ ಸಚಿವ ಮನೀಶ್ ಸಿಸೋಡಿಯಾ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಮದ್ಯದ ದೊರೆಗಳಿಗೆ ಲಾಭವಾಗುವಂತೆ ಕೆಲಸ ಮಾಡಿ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಕ್ಸೇನಾ ಅವರ ಸಲಹೆಯನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದು, ನೀತಿಯ ಬಗ್ಗೆ ತನಿಖೆಗೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪಕ್ಷದ ಪತ್ರಿಕಾಗೋಷ್ಠಿಯಲ್ಲಿ, ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ, ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು, "ಕೇಜ್ರಿವಾಲ್ ಸ್ವತಃ ಪ್ರಾಮಾಣಿಕತೆಯ ಪ್ರಮಾಣಪತ್ರಗಳನ್ನು ನೀಡುವ ಮೊದಲು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಿ" ಎಂದು ಹೇಳಿದರು.
ದೆಹಲಿ ಸರ್ಕಾರವು ಅಕ್ರಮವಾಗಿ ಮದ್ಯ ನೀತಿಯನ್ನು ಜಾರಿಗೆ ತಂದಿದೆ ಇದು ರಾಷ್ಟ್ರ ರಾಜಧಾನಿಯ ಜನರಿಗೆ ಮಾಡಿದ ವಂಚನೆ ಎಂದು ಮೀನಾಕ್ಷಿ ಲೇಖಿ ಆಪ್ ವಿರುದ್ಧ ಹರಿಹಾಯ್ದರು.

ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ
ಆಮ್ ಆದ್ಮಿ ಪಕ್ಷದ ನಾಯಕರು ಕೆಲಸ ಮಾಡುವುದನ್ನು ತಡೆಯಲು ನಕಲಿ ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ ಎಂದು ಕೇಂದ್ರ ಬಿಜೆಪಿ ವಿರುದ್ಧ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
"ಭಾರತದ ಹೊಸ ನಿಯಮವೆಂದರೆ ಮೊದಲು ಯಾರನ್ನು ಜೈಲಿಗೆ ಹಾಕಬೇಕು ಎಂದು ನಿರ್ಧರಿಸಲಾಗುತ್ತದೆ. ನಂತರ ಆ ವ್ಯಕ್ತಿಯನ್ನು ಎಲ್ಲಾ ರೀತಿಯ ಕಟ್ಟುಕಥೆಗಳು ಮತ್ತು ಸುಳ್ಳುಗಳ ಮೂಲಕ ಪಟ್ಟುಬಿಡದೆ ಸಿಲುಕಿಸಲಾಗುತ್ತದೆ" ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ತನಿಖಾ ಸಂಸ್ಥೆಗಳನ್ನು ರಾಜಕೀಯ ಸೇಡಿಗಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಕೂಡ ಆರೋಪಿಸಿತ್ತು.

ಅರವಿಂದ್ ಕೇಜ್ರಿವಾಲ್ ಸಿಂಗಾಪುರ ಪ್ರವಾಸಕ್ಕೆ ಅಡ್ಡಿ
"ದೆಹಲಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸವನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಬಯಸುತ್ತಿದೆ. ಸಿಂಗಾಪುರವು ಪ್ರಪಂಚದಾದ್ಯಂತದ ಮೇಯರ್‌ಗಳನ್ನು ಆಹ್ವಾನಿಸಿದೆ ಮತ್ತು ದೆಹಲಿಯಲ್ಲಿ ಕೆಲಸವು ಎಷ್ಟು ಉತ್ತಮವಾಗಿದೆ ಎನ್ನುವುದರ ಬಗ್ಗೆ ಮೇಯರ್ ಗಳಿಗೆ ಮಾಹಿತಿ ನೀಡಲು ನನ್ನನ್ನು ಕೇಳಿದೆ. ಆದರೆ ಕೇಂದ್ರ ಸರ್ಕಾರ ನಮ್ಮನ್ನು ತಡೆಯಲು ಬಯಸುತ್ತಾರೆ. ಜನರನ್ನು ಲೂಟಿ ಮಾಡಲು ನಮಗೆ ಹಾನಿ ಮಾಡಲು ಬಯಸುತ್ತಾರೆ," ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಿಂಗಾಪುರ ಪ್ರವಾಸವನ್ನು ಲೆಫ್ಟಿನೆಂಟ್ ಗವರ್ನರ್ ತಡೆದಿದ್ದರು. ಗವರ್ನರ್ ನಡೆಗೆ ಆಪ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.
"ವಿಶ್ವ ನಗರಗಳ ಶೃಂಗಸಭೆ" ಗಾಗಿ ಕೇಜ್ರಿವಾಲ್ ಅವರನ್ನು ಸಿಂಗಾಪುರದ ಹೈ ಕಮಿಷನರ್ ಸೈಮನ್ ವಾಂಗ್ ಆಹ್ವಾನಿಸಿದ್ದರು. ಅವರು ಆಗಸ್ಟ್ 1 ರಂದು ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.












Click it and Unblock the Notifications