ದೆಹಲಿ ಚುನಾವಣೆ: ಮತ ಚಲಾಯಿಸಿದ 111 ವರ್ಷದ ಅಜ್ಜಿ
ನವದೆಹಲಿ, ಫೆಬ್ರವರಿ 8: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 111 ವರ್ಷದ ಅತ್ಯಂತ ಹಿರಿಯ ಮಹಿಳೆ ಕಲಿತಾರಾ ಮಂಡಲ್ ಶನಿವಾರ ಮತ ಚಲಾಯಿಸಿದರು.
ದೆಹಲಿ ಚುನಾವಣೆಯಲ್ಲಿ ಅತ್ಯಂತ ಹಿರಿಯ ಮತದಾರರೆನಿಸಿರುವ ಮಂಡಲ್, ತಮ್ಮ ಹಕ್ಕು ಚಲಾವಣೆಯ ಜತೆಗೆ. ಜವಾಬ್ದಾರಿಯುತ ಮತದಾರರು ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಸಿಆರ್ ಪಾರ್ಕ್ ವಿಧಾನಸಭೆ ಕ್ಷೇತ್ರದಲ್ಲಿನ ಮತಗಟ್ಟೆಗೆ ತಮ್ಮ ಮಗ, ಮೊಮ್ಮಗ ಮತ್ತು ಕುಟುಂಬದ ಇತರೆ ಸದಸ್ಯರೊಂದಿಗೆ ಬಂದ 111 ವರ್ಷದ ಮಂಡಲ್, ಮತ ಚಲಾಯಿಸಿದ ಬಳಿಕ ಛಾಯಾಗ್ರಾಹಕರಿಗೆ ಬೆರಳು ತೋರಿಸಿ ಸಂಭ್ರಮಿಸಿದರು.

'ಈ ಚುನಾವಣೆಯಲ್ಲಿ ಮತಹಾಕಿರುವುದು ಖುಷಿ ನೀಡಿದೆ. ನಾನು ಎಷ್ಟು ಚುನಾವಣೆಗಳಲ್ಲಿ ಮತ ಹಾಕಿದ್ದೇನೆಯೋ ನನಗೆ ನೆನಪಾಗುತ್ತಿಲ್ಲ. ಆದರೆ ಜವಾಬ್ದಾರಿಯುತ ಪ್ರಜೆಗಳಾಗಿ ನಾವು ಮತ ಚಲಾಯಿಸಬೇಕು. ಇತರೆ ನಾಗರಿಕರೂ ಬಂದು ಮತ ಚಲಾಯಿಸಬೇಕು ಎಂದು ಕೋರುತ್ತೇನೆ' ಎಂದು ಮಂಡಲ್ ಹೇಳಿದ್ದಾರೆ.
ಅವಿಭಜಿತ ಭಾರತದ ಬರಿಸಾಲ್‌ನಲ್ಲಿ (ಈಗಿನ ಬಾಂಗ್ಲಾದೇಶ) 1908ರಲ್ಲಿ ಜನಿಸಿದ ಮಂಡಲ್, ಎರಡು ವಿಭಜನೆಗಳ ಸಹಿತ ಉಪಖಂಡದ ಅನೇಕ ರಾಜಕೀಯ ಮತ್ತು ಭೌಗೋಳಿಕ ಬದಲಾವಣೆಯ ಹಂತಗಳಿಗೆ ಸಾಕ್ಷಿಯಾಗಿದ್ದಾರೆ. ರಾಜಧಾನಿ ದೆಹಲಿಯಲ್ಲಿ ನೆಲೆ ಕಂಡುಕೊಳ್ಳುವವರೆಗೂ ಎರಡು ಬಾರಿ ಭಾರತದಲ್ಲಿಯೇ 'ನಿರಾಶ್ರಿತ'ರಾಗಿದ್ದರು.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 68 ಪುರುಷರು ಮತ್ತು 64 ಮಹಿಳೆಯರು ಸೇರಿದಂತೆ 132 ಶತಾಯುಷಿ ಮತದಾರರಿದ್ದಾರೆ. ಅವರಲ್ಲಿ ಮಂಡಲ್ ಅತಿ ಹಿರಿಯರು.












Click it and Unblock the Notifications