ಹಿಜಾಬ್ vs ಕೇಸರಿ ಶಾಲು ವಿವಾದ: ಕೇಂದ್ರ ಶಿಕ್ಷಣ ಸಚಿವರ ಮಧ್ಯಪ್ರವೇಶಕ್ಕೆ ಆಗ್ರಹ
ನವದೆಹಲಿ, ಫೆಬ್ರವರಿ 10: ಕರ್ನಾಟಕದ ಶಾಲಾ- ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸುವಂತೆ ರಾಜ್ಯ ಸರ್ಕಾರದ ಆದೇಶದ ಹೊರತಾಗಿಯೂ, ಹಿಜಾಬ್ ಪರ ಮತ್ತು ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ಮುಂದುವರೆದಿದ್ದವು. ಪರಿಸ್ಥಿತಿ ಕೈ ಮೀರುವುದನ್ನು ಕಂಡ ರಾಜ್ಯ ಸರ್ಕಾರ ಬುಧವಾರದಿಂದ ಶುಕ್ರವಾರದವರೆಗೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದೆ.
ಕರ್ನಾಟಕದ ಶಾಲಾ- ಕಾಲೇಜುಗಳಲ್ಲಿ ತಲೆದೋರಿರುವ ಹಿಜಾಬ್- ಕೇಸರಿ ಶಾಲು ವಿವಾದದ ಕುರಿತು ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಐ-ಎಂ) ನಾಯಕ ಎಲಮರಮ್ ಕರೀಂ ಅವರು ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕಾಗಿ ತರಗತಿಗಳಿಗೆ ಹಾಜರಾಗುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಕೋಮು ಧ್ರುವೀಕರಣ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಅನಗತ್ಯ ವಿವಾದ ಸೃಷ್ಟಿಸುತ್ತಿರುವುದನ್ನು ಗಮನಿಸಬೇಕೆಂದು ತಿಳಿಸಿದ್ದಾರೆ.

ಹಿಜಾಬ್ ವಿವಾದದ ಬೆಳವಣಿಗೆ ಮುಸ್ಲಿಂ ಸಮುದಾಯದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಇಲ್ಲಿಯವರೆಗೂ ಮುಸ್ಲಿಂ ಹುಡುಗಿಯರು ಯಾವುದೇ ಆಕ್ಷೇಪವಿಲ್ಲದೇ ತಲೆಗೆ ಹಿಜಾಬ್ ಧರಿಸುತ್ತಿದ್ದರು. ಅವರು ಸಾಮಾನ್ಯ ಸಮವಸ್ತ್ರ ನಿಯಮ ಅನುಸರಿಸುತ್ತಿಲ್ಲ ಎಂದು ಹೇಳಿ ಹಿಜಬ್‌ಗೆ ಅನುಮತಿಸುತ್ತಿಲ್ಲ ಎಂದು ಹೇಳಿದರು.
ಇಷ್ಟು ವರ್ಷಗಳಿಂದ ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸುತ್ತಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಏಕರೂಪತೆ ಅನುಸರಿಸಲು ತಲೆಗೆ ಸ್ಕಾರ್ಫ್ ಬಣ್ಣವನ್ನು ಸಹ ಸೂಚಿಸಲಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ದಶಕಗಳವರೆಗೆ ಯಾವುದೇ ವಿವಾದಗಳಿದ್ದಿಲ್ಲ. ಇದನ್ನು ಉದ್ದೇಶಪೂರ್ವಕವಾಗಿ ವಿಭಜನೆ ಮತ್ತು ಕೋಮು ಭಾವನೆಗಳನ್ನು ಕೆರಳಿಸಲು ವಿವಾದ ಮಾಡಲಾಗುತ್ತಿದೆ ಎಂದು ಸಿಪಿಐ-ಎಂ ನಾಯಕ ಎಲಮರಮ್ ಕರೀಂ ಹೇಳಿದ್ದಾರೆ.
ಇನ್ನು ತರಗತಿಗಳಿಗೆ ಹಾಜರಾಗುವುದು ವಿದ್ಯಾರ್ಥಿಗಳ ಹಕ್ಕು ಪ್ರಾಥಮಿಕ ಕಾಳಜಿಯಾಗಿರಬೇಕು. ಜನರ ನಡುವೆ ದ್ವೇಷ ಮತ್ತು ವಿಭಜನೆಯನ್ನು ಹರಡುವ ಯಾವುದೇ ಕ್ರಮವನ್ನು ಕಠಿಣ ಕ್ರಮಗಳೊಂದಿಗೆ ವ್ಯವಹರಿಸಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಮ್ಮ ಮಧ್ಯಪ್ರವೇಶ ಅವಶ್ಯಕ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್‌ರಲ್ಲಿ ಮನವಿ ಮಾಡಿದ್ದಾರೆ.
ವಿಶೇಷ ಪೀಠದಲ್ಲಿ ಗುರುವಾರದಿಂದ ಅರ್ಜಿ ವಿಚಾರಣೆ
ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಶೇಷ ಪೀಠ ರಚನೆ ಮಾಡಲಾಗಿದೆ.
ಬುಧವಾರ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿತ್ತು. ಬಳಿಕ ನ್ಯಾಯಮೂರ್ತಿಗಳು ಅರ್ಜಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದ್ದರು.
ಈಗ ಅರ್ಜಿಗಳ ವಿಚಾರಣೆಗೆ ವಿಶೇಷ ಪೂರ್ಣ ಪೀಠವನ್ನು ರಚನೆ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೂರ್ಣ ಪೀಠ ಗುರುವಾರ ಮಧ್ಯಾಹ್ನ 2.30ರಿಂದ ಅರ್ಜಿ ವಿಚಾರಣೆ ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಇದ್ದು, ಗುರುವಾರವೇ ವಿಚಾರಣೆ ಆರಂಭವಾಗಲಿದೆ.












Click it and Unblock the Notifications