ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂಕಪ್ರಾಣಿಗಳ ಆಕ್ರಂದನ: ಕಸದ ರಾಶಿಯಲ್ಲಿ ಪ್ಲಾಸ್ಟಿಕ್ ತಿನ್ನುತ್ತಿರುವ ಆನೆಗಳು
ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ವಲಯದಲ್ಲಿ ಇತ್ತೀಚೆಗೆ ಆನೆಗಳು ಕಸದ ರಾಶಿಯ ನಡುವೆ ಆಹಾರ ಹುಡುಕುತ್ತಿರುವ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ತಿನ್ನುತ್ತಿರುವ ಆತಂಕಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಘಟನೆ ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ಮೂಡಿಸಿದ್ದು, ನೆಟ್ಟಿಗರು ಮಾನವನ ಬೇಜವಾಬ್ದಾರಿತನ ಹಾಗೂ ಪರಿಸರ ನಾಶದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
"ಯಾವಾಗಲೂ ಸರ್ಕಾರವನ್ನೇ ದೂಷಿಸುವುದರಲ್ಲಿ ಅರ್ಥವಿಲ್ಲ. ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ನಾವೇ ಪ್ರತಿನಿತ್ಯ ತರಕಾರಿ, ದಿನಸಿ ತರಲು ಮನೆಯಿಂದಲೇ ಮರುಬಳಕೆ ಮಾಡಬಹುದಾದ ಕೈಚೀಲಗಳನ್ನು ಕೊಂಡೊಯ್ಯುವ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಮಾತ್ರ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯ" ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬರು "ಅತಿಯಾದ ಪ್ರವಾಸೋದ್ಯಮ, ಮನುಷ್ಯನ ಬೇಜವಾಬ್ದಾರಿತನ, ಅರಣ್ಯ ನಾಶ ಹಾಗೂ ಮಿತಿಮೀರಿದ ಬಳಕೆ ಪರಿಸರವನ್ನು ಹಾಳುಮಾಡುತ್ತಿದೆ. ಮನುಷ್ಯನಿಗೆ ಇತರ ಜೀವಿಗಳ ಮೇಲಿನ ಕಾಳಜಿ ಇಲ್ಲದಂತಾಗಿದೆ. ಪ್ರಕೃತಿಯಲ್ಲಿ ಮಾನವನನ್ನು ಹೊರತುಪಡಿಸಿ ಉಳಿದೆಲ್ಲ ಮೂಕಪ್ರಾಣಿಗಳಿಗೆ ಇದು ದೊಡ್ಡ ದುರಂತ" ಎಂದು ಬೇಸರ ಹೊರಹಾಕಿದ್ದಾರೆ.

ಪ್ರಕೃತಿಯ ಶತ್ರು ಮಾನವ
ಇದು ನಿಜಕ್ಕೂ ಅತ್ಯಂತ ದುಃಖದ ಸಂಗತಿ. ಪ್ರಕೃತಿಯ ಅತಿ ದೊಡ್ಡ ಶತ್ರು ಎಂದರೆ ಅದು ಮನುಷ್ಯ ಮಾತ್ರ. ಮಾನವ ದಿನದಿಂದ ದಿನಕ್ಕೆ ಸ್ವಾರ್ಥಿ ಮತ್ತು ಕ್ರೂರಿಯಾಗುತ್ತಿದ್ದಾನೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಪ್ರತಿದಿನ ಸೃಷ್ಟಿಯಾಗುವ ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ನಾವೆಲ್ಲರೂ ಸಮಾನ ಭಾಗಿಗಳು. ಪ್ಲಾಸ್ಟಿಕ್ ಮಾಲಿನ್ಯ ತಡೆಯಲು ನಮ್ಮಿಂದಲೇ ಬದಲಾವಣೆ ಆರಂಭವಾಗಬೇಕು. ನಮ್ಮ ದೈನಂದಿನ ಹವ್ಯಾಸಗಳಲ್ಲಿ ಮಾಡಿಕೊಳ್ಳುವ ಸಣ್ಣ ಬದಲಾವಣೆಗಳು ಮುಂದಿನ ಪೀಳಿಗೆಗೆ ಹಸಿರು ಮತ್ತು ಸ್ವಚ್ಛ ಭವಿಷ್ಯವನ್ನು ನೀಡಬಲ್ಲವು" ಎಂದು ಹಲವರು ಆಶಯ ವ್ಯಕ್ತಪಡಿಸಿದ್ದಾರೆ.
ಎಚ್ಚೆತ್ತ ಅಧಿಕಾರಿಗಳು: ಕಸ ವಿಲೇವಾರಿ
ವನ್ಯಜೀವಿಗಳು ಕಸ ತಿನ್ನುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ಅಧಿಕಾರಿಗಳು ತಕ್ಷಣವೇ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ, ಮೂಲಗಳ ಪ್ರಕಾರ ಈ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು, ಕೆಲವು ಕಡೆ ಜೆಸಿಬಿ ಯಂತ್ರ ಬಳಸಿ ಕಸವನ್ನು ಮಣ್ಣಿನಲ್ಲಿ ಹೂತು ಹಾಕಲಾಗಿದೆ. ಇನ್ನು ಕೆಲವು ಕಡೆ ಕಸದ ರಾಶಿಗಳಿಗೆ ನೇರವಾಗಿ ಬೆಂಕಿ ಹಚ್ಚಿ ಸುಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Its a collective shame that in MM Hills of Karnataka, a wild elephant is reduced to scavenging desperately through plastic waste. pic.twitter.com/evdpQxc19j
— Karthik Reddy (@bykarthikreddy) June 16, 2026
ಈ ಘಟನೆ ನಡೆದಿರುವ ಮಲೆ ಮಹದೇಶ್ವರ ದೇವಾಲಯದ ಆವರಣವು ವನ್ಯಜೀವಿ ಕಾರಿಡಾರ್ ವ್ಯಾಪ್ತಿಯಲ್ಲಿ ಬರುತ್ತದೆ. ಇದು ಮಲೆ ಮಹದೇಶ್ವರ ವನ್ಯಜೀವಿ ಧಾಮ (MM Hills Wildlife Sanctuary) ಮತ್ತು ಕಾವೇರಿ ವನ್ಯಜೀವಿ ಧಾಮವನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಆನೆಗಳು ಹಾಗೂ ಹುಲಿಗಳ ಮುಕ್ತ ಸಂಚಾರಕ್ಕೆ ಈ ಅರಣ್ಯ ಕಾರಿಡಾರ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಸೂಕ್ಷ್ಮ ವಲಯದಲ್ಲೇ ಪ್ಲಾಸ್ಟಿಕ್ ತ್ಯಾಜ್ಯದ ಆಹುತಿ ಹೆಚ್ಚುತ್ತಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.













Click it and Unblock the Notifications