ಕೊರೊನಾ ಭಯ: ಆಸ್ಪತ್ರೆಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹೇರುವ ಸಂಭವ
ನವದೆಹಲಿ, ಮೇ 16: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ವೈರಸ್ ಸೋಂಕು ತಡೆಯಲು ಸಾಕಷ್ಟು ಕ್ರಮ ವಹಿಸುತ್ತಿದ್ದರೂ ಕೊರೊನಾ ಮಾತ್ರ ಯಾರ ಕೈಗೂ ಸಿಗದೇ ಹಬ್ಬುತ್ತಾ ಸಾಗಿದೆ.
ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಹಲವಾರು ಸುರಕ್ಷತಾ ಕ್ರಮಗಳನ್ನು ಸರ್ಕಾರ ಘೋಷಿಸಿದೆ. ಇದೀಗ, ''ಮೊಬೈಲ್ ಪೋನ್‌ಗಳಿಂದಲೂ ಕೊರೊನಾ ವೈರಸ್ ಸೋಂಕು ಹಬ್ಬುತ್ತದೆ. ಹಾಗಾಗಿ ದೇಶದ ಎಲ್ಲ ಆಸ್ಪತ್ರೆ ಒಳಗೆ ಮೊಬೈಲ್ ಬಳಕೆಗೆ ನಿಷೇಧ ಹೇರುವಂತೆ'' ಕೇಂದ್ರ ಸರ್ಕಾರಕ್ಕೆ ದೆಹಲಿ ಏಮ್ಸ್ ವೈದ್ಯರ ತಂಡ ಸಲಹೆ ನೀಡಿದೆ.
ಕೊರೊನಾ ವೈರಸ್ನಿಂದ ಕುಸಿದ ಮೊಬೈಲ್ ಮಾರುಕಟ್ಟೆ
ಕೊರೊನಾ ಭಯದ ನಡುವೆಯೂ ರೋಗಿಗಳೂ ಸೇರಿದಂತೆ ವೈದ್ಯರು, ನರ್ಸ್‌ಗಳು ಆಸ್ಪತ್ರೆಗಳಲ್ಲಿ ಮೊಬೈಲ್ ಬಳಕೆಯನ್ನು ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಮೊಬೈಲ್ ಬಳಕೆಗೆ ಸರ್ಕಾರ ಯಾವುದೇ ತಡೆ ನೀಡಿಲ್ಲ. ಈಗ ಮೊಬೈಲ್ ಬಳಕೆ ಕುರಿತಂತೆ ಆತಂಕ ವ್ಯಕ್ತಪಡಿಸಿರುವ ವೈದ್ಯರ ತಂಡ, ಕೊರೊನಾ ಹರಡುವಲ್ಲಿ ಮೊಬೈಲ್ ಬಹಳ ಅಪಾಯಕಾರಿ. ಬಾಯಿಯ ಸಂಪರ್ಕಕ್ಕೆ ನೇರ ಬರುವುದರಿಂದ ಕೊರೊನಾ ಹರಡುವ ಹೆಚ್ಚು ಆತಂಕವಿದೆ. ಆದರೆ, ಆಸ್ಪತ್ರೆಗಳಲ್ಲಿ ವೈದ್ಯರೂ ಮೊಬೈಲ್ ಬಳಸುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹೇರುವಂತೆ ಸಲಹೆ ನೀಡಿದೆ.
ಇನ್ನು, ಭಾರತದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಾ ಸಾಗಿ, ಪಾಸಿಟಿವ್ ಸಂಖ್ಯೆಯಲ್ಲಿ ಚೀನಾವನ್ನೇ ಮೀರಿಸುತ್ತಿದೆ. ಇಲ್ಲಿಯವರೆಗೆ 85,940 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ 30,153 ಚೇತರಿಸಿಕೊಂಡಿದ್ದಾರೆ. 2,752 ಜನ ಮೃತಪಟ್ಟಿದ್ದಾರೆ.