ಎಚ್ಚರಿಕೆ ವಹಿಸಿ: ಕೊರೊನಾ ಬಗ್ಗೆ ಮತ್ತೊಂದು ಸುಳ್ಳು ಸುದ್ದಿ
ನವ ದೆಹಲಿ, ಮಾರ್ಚ್ 25: ಕೊರೊನಾ ವೈರಸ್ ಸುತ್ತ ಮುತ್ತ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಅದೇ ರೀತಿ ಮತ್ತೊಂದು ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ, ಮೊಬೈಲ್ ಸಂದೇಶಗಳಲ್ಲಿ ಚರ್ಚೆ ಆಗುತ್ತಿದೆ. ಸರ್ಕಾರ ಜನರು ಮಾಡುವ ಮೊಬೈಲ್ ಕರೆ ಮತ್ತು ಸಂದೇಶಗಳ ಮೇಲೆ ನಿಯಂತ್ರಣ ತಂದಿದೆ ಎನ್ನುವ ಸುದ್ದಿ ಇದಾಗಿದೆ.
''ಸರ್ಕಾರ ಜನರು ಮಾಡುವ ಕರೆಗಳನ್ನು ರೆಕಾರ್ಡ್ ಮಾಡುತ್ತಿದೆ. ಸಂದೇಶಗಳ ಮೇಲೆಯೂ ಗಮನ ಇಟ್ಟಿದೆ. ಸೋಷಿಯಲ್ ಮೀಡಿಯಾದ ಬಳಕೆಯಲ್ಲಿ ನಿಯಂತ್ರಣ ತಂದಿದೆ. ಈ ಬಗ್ಗೆ ನಿಮ್ಮ ಸ್ನೇಹಿತರಿಗೆ, ಸಂಬಂಧಿಗಳಿಗೆ ತಿಳಿಸಿ. ಹಾಗಾಗಿ ಸರ್ಕಾರ ಬಗ್ಗೆ, ಪ್ರಧಾನ ಮಂತ್ರಿಗಳ ಬಗ್ಗೆ ಯಾವುದೇ ಸಂದೇಶವನ್ನು ಫಾರ್ವರ್ಡ್ ಮಾಡಬೇಡಿ'' ಎನ್ನುವ ಸಂದೇಶಗಳು ಹರಿದಾಡುತ್ತಿದೆ.
ಆದರೆ, ಈ ರೀತಿ ಸರ್ಕಾರ ಜನರ ಸಂದೇಶಗಳ ಮೇಲೆ ಹಾಗೂ ಕರೆಗಳ ಮೇಲೆ ಯಾವುದೇ ನಿಯಂತ್ರಣ ತಂದಿಲ್ಲ. ಸದ್ಯ ಸರ್ಕಾರ ಕೊರೊನಾ ವೈರಸ್ ತಡೆಯ ಬಗ್ಗೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಬಗ್ಗೆ ಪತ್ರಿಕಾ ಮಾಹಿತಿ ಇಲಾಖೆ ಸ್ಪಷ್ಟನೆ ನೀಡಿದೆ. ಆದರೆ, ಹಾಗೆಂದ ಮಾತ್ರಕ್ಕೆ ಸುಳ್ಳು ಸುದ್ದಿಗಳನ್ನು ಹಬ್ಬಿಸ ಬೇಡಿ ಎಂದು ಎಚ್ಚರಿಕೆ ನೀಡಿದೆ.

ಕೊರೊನಾ ವೈರಸ್ ಬಗ್ಗೆ ಅನೇಕ ಸುಳ್ಳು ಸುದ್ದಿಗಳು ಬರುತ್ತಿದೆ. ಜನರು ಅದನ್ನೇ ನಂಬುತ್ತಿದ್ದಾರೆ. ಆದರೆ, ಆ ಸುದ್ದಿಗಳನ್ನು ಅನುಸರಿಸಬೇಡಿ ಎಂದು ಸರ್ಕಾರ ಮನವಿ ಮಾಡಿದೆ.
ಸದ್ಯ, ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದೆ. ಕರ್ನಾಟಕದಲ್ಲಿ 41 ಪಾಸಿಟಿವ್ ಪ್ರಕರಣಗಳು ದೃಢವಾಗಿವೆ.












Click it and Unblock the Notifications