Breaking: ಬೆಲೆ ಏರಿಕೆ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ನವದೆಹಲಿ, ಸೆ.04: ಭಾನುವಾರ ನಡೆಯಲಿರುವ ಕಾಂಗ್ರೆಸ್ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯ ದೆಹಲಿಯ ರಾಮಲೀಲಾ ಮೈದಾನ ಮತ್ತು ಸುತ್ತಮುತ್ತ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸಂಚಾರ ದಟ್ಟಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾನುವಾರದಂದು ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರುವ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ಪ್ರಕಾರ, ರ್‍ಯಾಲಿ ನಡೆಯುವ ಸ್ಥಳದಲ್ಲಿ ಸ್ಥಳೀಯ ಪೊಲೀಸರೊಂದಿಗೆ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗುವುದು. ರಾಮಲೀಲಾ ಮೈದಾನದ ಪ್ರವೇಶ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್‌ಗಳನ್ನು ಸಹ ಇರಿಸಲಾಗುತ್ತದೆ ಎಂದಿದ್ದಾರೆ.

"ನಾಳೆ ರಾಮ್‌ಲೀಲಾ ಮೈದಾನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರತಿಭಟನೆಗೆ ಕರೆ ನೀಡಿರುವ ಕಾರಣ, ಸ್ಥಳದ ಸುತ್ತಲಿನ ಕೆಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗುತ್ತದೆ. ಹೀಗಾಗಿ ಪ್ರಯಾಣಿಕರು ಬೇರೆ ಮಾರ್ಗಗಳನ್ನು ಬಳಸಬೇಕು" ಎಂದು ದೆಹಲಿ ಟ್ರಾಫಿಕ್ ಪೊಲೀಸರು ಶನಿವಾರ ಟ್ವೀಟ್ ಮಾಡಿದ್ದಾರೆ.
ಬಾರಾಖಂಬಾ ರಸ್ತೆಯಿಂದ ಗುರುನಾನಕ್ ಚೌಕ್‌ಗೆ ರಂಜೀತ್ ಸಿಂಗ್ ಫ್ಲೈಓವರ್, ವಿವೇಕಾನಂದ ಮಾರ್ಗ (ಎರಡೂ ಬದಿಗಳು), JLN ಮಾರ್ಗ (ದೆಹಲಿ ಗೇಟ್‌ನಿಂದ ಗುರುನಾನಕ್ ಚೌಕ್), ಕಮಲಾ ಮಾರುಕಟ್ಟೆಯ ಸುತ್ತ ಗುರುನಾನಕ್ ಚೌಕ್, ಚಮನ್ ಲಾಲ್ ಮಾರ್ಗ, ಅಜ್ಮೇರಿ ಗೇಟ್ ಅಸಫ್ ಅಲಿ ರಸ್ತೆ ಮತ್ತು DDU ಕಡೆಗೆ -ಕಮಲಾ ಮಾರುಕಟ್ಟೆಯ ಕಡೆಗೆ ಮಿಂಟೋ ರಸ್ತೆಯ ರೆಡ್ ಲೈಟ್ ಪಾಯಿಂಟ್ ಮುಚ್ಚಲಾಗುವುದು ಎಂದು ಹೇಳಿದೆ.
ಕಾಂಗ್ರೆಸ್ ನಾಯಕರು ಈ ವಾರದ ಆರಂಭದಲ್ಲಿ ದೇಶದಾದ್ಯಂತ 22 ನಗರಗಳಲ್ಲಿ ಸುದ್ದಿಗೋಷ್ಠಿಗಳನ್ನು ನಡೆಸಿ, ಸೆಪ್ಟೆಂಬರ್ 4 ರಂದು ರಾಮಲೀಲಾ ಮೈದಾನದಲ್ಲಿ ''ಮೆಹಂಗೈ ಪರ್ ಹಲ್ಲಾ ಬೋಲ್ ರ್‍ಯಾಲಿ'' ಮತ್ತು "ದಿಲ್ಲಿ ಚಲೋ" ಕರೆ ನೀಡಿದರು. ರ್‍ಯಾಲಿಯಲ್ಲಿ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಮಾತನಾಡಲಿದ್ದಾರೆ.

ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಮಾತನಾಡಿ, "ಕೇಂದ್ರವು ಪ್ರತಿಪಕ್ಷಗಳನ್ನು ಮೌನಗೊಳಿಸಲು ಸಿಬಿಐ ಮತ್ತು ಇಡಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆದರೆ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅಗತ್ಯ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ಹೇರುವಿಕೆಯ ವಿರುದ್ಧ ಪಕ್ಷವು ಧ್ವನಿ ಎತ್ತುವುದನ್ನು ಮುಂದುವರಿಸುತ್ತದೆ" ಎಂದು ಹೇಳಿದರು.
"ಇಂದಿನ ಹಲ್ಲಾ ಬೋಲ್ ರ್‍ಯಾಲಿಗೂ ರಾಜ್ಯ ಚುನಾವಣೆಗೂ, 2024ರ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ದೇಶದ ಜನರು ಹಣದುಬ್ಬರ ಮತ್ತು ನಿರುದ್ಯೋಗದಿಂದ ತೊಂದರೆಗೀಡಾಗಿದ್ದು, ಸಂವೇದನೆ ಕಳೆದುಕೊಂಡಿರುವ ಕೇಂದ್ರ ಸರ್ಕಾರಕ್ಕೆ ಇದು ಸೂಕ್ತ ಸಂದೇಶ" ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದರು.












Click it and Unblock the Notifications