ದೆಹಲಿ ಸಭೆಯಲ್ಲಿ ಕಾನೂನು ತಂಡದ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಗರಂ!
ಬೆಂಗಳೂರು, ಆ. 26: "ನಾನು ಎಲ್ಲರಂತಲ್ಲ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಮತ್ತೊಮ್ಮೆ ಗರಂ ಆಗಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಾಗ ವಿಧಾನಸೌಧದಲ್ಲಿ ನಡೆಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ, "ಹಿಂದೆನಾಗಿದೆ ನನಗೇ ಬೇಕಿಲ್ಲ. ನಾನು ಎಲ್ಲರಂತಲ್ಲ" ಎಂದು ಖಡಕ್ ಆದೇಶ ಕೊಟ್ಟಿದ್ದರು. ಆ ಮೂಲಕ ತಾವು ಈ ಹಿಂದಿನ ಯಾವುದೇ ಮುಖ್ಯಮಂತ್ರಿಗಳಂತೆ ಅಲ್ಲ ಎಂದು ಎಚ್ಚರಿಸಿದ್ದರು.
ಇದೀಗ ದೆಹಲಿಯಲ್ಲಿ ನಡೆದ ಕಾನೂನು ತಜ್ಞರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗರಂ ಆಗಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ವಕಾಲತ್ತು ವಹಿಸುವ ಹಿರಿಯ ವಕೀಲರ ತಂಡಕ್ಕೆ ಬೊಮ್ಮಾಯಿ ಖಡಕ್ ಸಂದೇಶ ನೀಡಿದ್ದಾರೆ. "ನಾನು ಖಡಕ್ ಮುಖ್ಯಮಂತ್ರಿ. ಬೇರೆ ಮುಖ್ಯಮಂತ್ರಿಗಳಂತೆ ನಾನಲ್ಲ. ಹಿಂದಿನಿಂದಲೂ ಕೆಲಸ ಮಾಡಿಕೊಂಡು ಬಂದಿದ್ದಿರಿ. ರಾಜ್ಯದ ಜಲ ವ್ಯಾಜ್ಯಗಳಿಗೆ ಇನ್ನು ಮುಂದೆ ವೇಗ ಸಿಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು" ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಆದರೆ ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆಯಾ? ಕೃಷ್ಣಾ ಮೇಲ್ದಂಡೆ ಯೋಜನೆಗೆ ಬೇಕಾಗಿರುಯವ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದೆಯಾ? ಎಂಬುದಕ್ಕೆ ಜಲಸಂಪನ್ಮೂಲ ಸಚಿವರಾಗಿಯೂ ಈ ಹಿಂದೆ ಕೆಲಸ ನಿರ್ವಹಿಸಿದ್ದ ಸಿಎಂ ಬೊಮ್ಮಾಯಿ ಉತ್ತರಿಸಬೇಕಿದೆ.

ಕೃಷ್ಣಾ ನದಿ ನೀರಿನ ಬಳಕೆಗೆ ಅನುಮತಿಗಾಗಿ ಮನವಿ!
ಅಂತರರಾಜ್ಯ ಜಲವಿವಾದಗಳನ್ನು ಶೀಘ್ರವಾಗಿ ಮುಗಿಯುವಂತೆ ನೋಡಿಕೊಳ್ಳಿ ಎಂದು ರಾಜ್ಯದ ವಕೀಲರ ತಂಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಸಭೆಯ ಬಳಿಕ ಮಾತನಾಡಿರುವ ಅವರು, ರಾಜ್ಯದ ಯೋಜನೆಗಳ ಬಗ್ಗೆ ಸಮಾಲೋಚನೆ ಮಾಡಿದ್ದೇವೆ. ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದೇನೆ. ನ್ಯಾಯವಾದಿಗಳಾದ ಮೋಹನ್ ಕಾತರಕಿ, ಶಾಮ್ ದಿವಾನ್ ಜೊತೆಗೆ ಪ್ರಮುಖವಾಗಿ ಚರ್ಚೆ ಮಾಡಿದ್ದೇವೆ. ಕೃಷ್ಣಾ ನದಿ ನೀರು ಹಂಚಿಕೆ ಬಗ್ಗೆ ತೆಲಂಗಾಣ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬರಲಿದೆ. ಆ ವೇಳೆ ಕೃಷ್ಣಾ ನದಿ ನೀರಿನ ಬಳಕೆಗೆ ಅನುಮತಿಗಾಗಿ ಮನವಿ ಕೋರಲಿದ್ದೇವೆ" ಎಂದಿದ್ದಾರೆ.

ಮದುರೈ ಕೋರ್ಟ್‌ನಲ್ಲಿ ಮೇಕೆದಾಟು ಪ್ರಕರಣ!
ಜೊತೆಗೆ, ಮೇಕೆದಾಟು ವಿರೋಧಿಸಿ ಮದುರೈ ಕೋರ್ಟ್‌ನಲ್ಲಿ ಪ್ರಕರಣವಿದೆ. ಪ್ರಕರಣದಲ್ಲಿ ನಮ್ಮನ್ನು ಭಾಗಿದಾರರನ್ನಾಗಿ ಮಾಡಲು ಮನವಿ ಮಾಡಬೇಕಿದೆ. ಅದರೊಂದಿಗೆ ಮೇಕೆದಾಟು ಯೋಜನೆಗೆ ಅನುಮತಿ ಕೊಡುವಂತೆ ಮನವಿ ಮಾಡಲಿದ್ದೇವೆ. ಮಹದಾಯಿ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ಇದೇ ಸಂದರ್ಭದಲ್ಲಿ ತಮಿಳುನಾಡು ಮಾಡುತ್ತಿರುವ ಅಕ್ರಮ ಯೋಜನೆಗಳ ಬಗ್ಗೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದೇವೆ. ಇನ್ನೊಂದು ವಾರದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ" ಎಂದು ಸಿಎಂ ಬೊಮ್ಮಾಯಿ ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.

ಪ್ರಕರಣವನ್ನು ವಜಾ ಮಾಡಿಸುತ್ತೆವೆ: ಸಿಎಂ ಬೊಮ್ಮಾಯಿ!
"ತಮಿಳುನಾಡಿನ ಮಧುರೈ ಕೋರ್ಟ್‌ನಲ್ಲಿ ಖಾಸಗಿ ವ್ಯಕ್ತಿಯೊಬ್ಬ ಮೇಕೆದಾಟು ಯೋಜನೆ ವಿಚಾರದಲ್ಲಿ ದೂರು ದಾಖಲಿಸಿದ್ದಾನೆ. ಜಲವಿವಾದಗಳ ಬಗ್ಗೆ ಪ್ರಾದೇಶಿಕ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಆದರೂ ಸಲ್ಲಿಸಿದ್ದಾರೆ. ಅದರಲ್ಲಿ ನಮ್ಮನ್ನು ಭಾಗಿದಾರನ್ನಾಗಿ ಮಾಡಿಲ್ಲ. ನಾವು ಹೊಸ ಅರ್ಜಿ ಸಲ್ಲಿಸಿ ಅದರಲ್ಲಿ ಭಾಗಿದಾರರನ್ನಾಗಿ ಮಾಡಲು ಕೊರುತ್ತೇವೆ. ಆ ಬಳಿಕ ಪ್ರಕರಣವನ್ನು ವಜಾ ಮಾಡಿಸುತ್ತೆವೆ ಎಂದು ಸಿಎಂ ಹೇಳಿಕೆ ಕೊಟ್ಟಿದ್ದಾರೆ.

ಕಾವೇರಿಗೆ ಗುಂಡಾರ್ ನದಿ ಜೋಡಣೆ ಅಕ್ರಮ!
ಕಾವೇರಿ ನದಿಯನ್ನು ಗುಂಡಾರ್ ನದಿಗೆ ಜೋಡಣೆ ಮಾಡುವ ಮೂಲಕ ತಮಿಳುನಾಡು ಅಕ್ರಮ ನೀರು ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಿದ್ದೇವೆ. ಅದಕ್ಕಾಗಿ ವಿಶೇಷ ಅರ್ಜಿ ಸಿದ್ದ ಪಡಿಸಲು ನಮ್ಮ ನ್ಯಾಯವಾದಿಗಳ ತಂಡಕ್ಕೆ ಸೂಚಿಸಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.












Click it and Unblock the Notifications