ಜಹಾಂಗೀರಪುರಿ ಗಲಭೆ : ಪೊಲೀಸರ ಪಕ್ಷಪಾತದ ನಡೆಗೆ ಮುಸ್ಲಿಂ ಸಮುದಾಯದ ಆಕ್ರೋಶ
ನವದೆಹಲಿ, ಏಪ್ರಿಲ್ 18 : ಹನುಮ ಜಯಂತಿ ವೇಳೆ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ನಡೆದ ಕೋಮುಗಲಭೆಯ ಒಂದು ದಿನದ ನಂತರ ಇಡೀ ಪ್ರದೇಶವನ್ನ ಪೊಲೀಸರು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಬಿಗಿ ಭದ್ರತೆ ಒದಗಿಸಿದ್ದಾರೆ. ಸದ್ಯಕ್ಕೆ ಕೋಮು ಗಲಭೆ ಉಂಟಾದ ಪ್ರದೇಶ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವಾಗ ಬೇಕಾದರೂ ಮತ್ತೆ ಸ್ಫೋಟವಾಗುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿರುವುದರಿಂದ ಜನರು ಮನೆಗಳಿಂದ ಆಚೆ ಬಂದಿಲ್ಲ. ಆದರೆ ಹಿಂಸಾಚಾರದ ಕಿಚ್ಚು ಮಾತ್ರ ಸ್ಪಷ್ಟವಾಗಿದ್ದು, ಮುಸ್ಲಿಂ ಸಮುದಾಯದ ಜನರು ಈ ಗಲಭೆ ಪ್ರಕರಣದಲ್ಲಿ ಪೊಲೀಸರು ಪಕ್ಷಪಾತ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.
ಇನ್ನು ಕೋಮು ಗಲಭೆ ಉಂಟಾದ ಬಳಿಕ ಸಿಎಚ್‌ಜಿ ಪ್ರದೇಶದಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಲಾಗಿದೆ. ಇತ್ತ ಪೊಲೀಸರು ಶಾಂತಿ ಸ್ಥಾಪಿಸಲು ಎರಡು ಸಮುದಾಯದ ಸದಸ್ಯರನ್ನ ಕರೆದು ಮಾತುಕತೆ ನಡೆಸಿದ್ದಾರೆ. ಆದರೆ ಮಾತುಕತೆ ವಾಗ್ವಾದಕ್ಕೆ ತಿರುಗಿದ್ದರಿಂದ ಪೊಲೀಸರು ಶಾಂತಿ ಮಾತುಕತೆಯನ್ನ ವಾಪಾಸ್ ಪಡೆದಿದ್ದಾರೆ. ಅಲ್ಲದೆ ಎರಡು ಸಮುದಾಯದ ಶಾಂತಿ ಕಾಪಾಡುವ ಪ್ರಯತ್ನದಲ್ಲಿ ತೊಡಗಿದ್ದೇವೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಲಭೆ ಕುರಿತಾಗಿ ಶಾಂತಿ ಸಮಿತಿ ಸದಸ್ಯ ಫರೀದ್ ಶಾ ಮಾತನಾಡಿದ್ದು, "ಈ ರೀತಿಯ ಗಲಭೆ ನಡೆದಿರುವುದು ನಿಜಕ್ಕೂ ನಿರಾಶದಾಯಕ. ಆದರೆ ಮತ್ತೆ ಈ ಪ್ರದೇಶವನ್ನ ಸಹಜ ಸ್ಥಿತಿಗೆ ತರಲು ಪೊಲೀಸರಿಗೆ ನಮ್ಮ ಕೈಯಲ್ಲಿ ಆದಷ್ಟು ಬೆಂಬಲ ನೀಡುತ್ತೇವೆ. ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕೋಮು ಗಲಭೆ ನಡೆದಿರುವುದು. ಗಲಭೆ ನಡೆದ ಮಸೀದಿಯ ಸಿ ಬ್ಲಾಕ್ ನಲ್ಲಿ ಈಗಲೂ ಕಲ್ಲು, ಕೇಸರಿ ಬಾವುಟಗಳಿವೆ. ಅಲ್ಲದೆ ಗಲಭೆ ಸಮಯದಲ್ಲಿ ಪೊಲೀಸರು ಸಿಕ್ಕ ಸಿಕ್ಕವರನ್ನೆಲ್ಲಾ ಬಂಧಿಸಿದ್ದಾರೆ. ಪೊಲೀಸರ ಈ ನಡೆಯ ವಿರುದ್ದ ಸ್ಥಳೀಯ ನಿವಾಸಿಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗಲಾಟೆ ನಡೆದ ಸಮಯದಲ್ಲಿ ಕೇವಲ ಮೂರು ಜನ ಪೊಲೀಸ್ ಅಧಿಕಾರಿಗಳನ್ನು ಸ್ಥಳದಲ್ಲಿ ನೇಮಕ ಮಾಡಲಾಗಿತ್ತು" ಅಂತ ಹೇಳಿದ್ದಾರೆ.

"ಹನುಮ ಜಯಂತಿಯ ದಿನ 400 ರಿಂದ 500 ಹಿಂದೂಗಳು ಶೋಭಾ ಯಾತ್ರೆ ನಡೆಸಿದ್ದರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ದೆಹಲಿ ಪೊಲೀಸರು ಭದ್ರತೆ ಏಕೆ ಒದಗಿಸಿಲ್ಲ? ಅಲ್ಲದೆ ಈ ಯಾತ್ರೆ ವೇಳೆ ಆರ್‌ಆರ್‌ಎಸ್ ನ ಕೆಲವರು ಮಸೀದಿ ಬಳಿ ಕೇಸರಿ ಬಾವುಟ ಹಾರಿಸಿ, ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿ ಮುಸ್ಲಿಂರನ್ನ ಕೆರಳಿಸಿದ್ದರು. ಹೀಗಾಗಿ ಮುಸ್ಲಿಂರು ಕೂಡ ಪ್ರತಿಕಾರವಾಗಿ ಕಲ್ಲು ತೂರಾಟ ನಡೆಸಿದ್ದರು" ಅಂತ ಗಲಾಟೆ ಆದ ಸ್ಥಳದಲ್ಲಿದ್ದ ಮಹಿಳೆ ಹೇಳಿಕೆ ನೀಡಿದ್ದಾರೆ.

ಗಲಭೆಯಲ್ಲಿ ಪೊಲೀಸರು ಅಪ್ರಾಪ್ತ ಬಾಲಕನೊಬ್ಬನನ್ನ ಬಂಧಿಸಿರುವುದಕ್ಕೆ ತೀವ್ರ ಕಿಡಿಕಾರಿರುವ ಬಾಲಕನ ತಂದೆ, 'ನಮ್ಮ ಸಮುದಾಯದವರನ್ನೇ ಏಕೆ ಎಲ್ಲದಕ್ಕೂ ಗುರಿ ಮಾಡುತ್ತೀರಿ? ನನ್ನ ಮಗ ಇದುವರೆಗೂ ಇಂತಹ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಇದೊಂದು ದೊಡ್ಡ ಷಡ್ಯಂತ್ರ' ಎಂದು ತಮ್ಮ ನೋವನ್ನ ವ್ಯಕ್ತಪಡಿಸಿದ್ದಾರೆ. ಇವರ ಜೊತೆಗೆ ಇನ್ನು ಕೆಲ ಮಹಿಳೆಯರು ತಮ್ಮ ಕುಟುಂಬದ ಸದಸ್ಯರ ಬಂಧಿಸಿರುವ ಪೊಲೀಸರ ಕ್ರಮದ ವಿರುದ್ದ ಪ್ರತಿಭಟನೆ ನಡೆಸಿದ್ದಲ್ಲದೆ ಠಾಣೆ ಎದುರು "ಅಲ್ಲಾಹು ಅಕ್ಬರ್" ಅಂತ ಘೋಷಣೆ ಕೂಗಿದ್ದಾರೆ.












Click it and Unblock the Notifications