ರಫೇಲ್: ಬೆಲೆಯ ವಿವರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಗೆ ನೀಡಿದ ಕೇಂದ್ರ
ನವದೆಹಲಿ, ನವೆಂಬರ್ 12: ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಯುದ್ಧ ವಿಮಾನಗಳ ಬೆಲೆ ಮತ್ತು ತಾಂತ್ರಿಕ ವಿವರಗಳನ್ನೊಳಗೊಂಡ ಸೀಲ್ ಮಾಡಲಾದ ಲಕೋಟೆಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ನೀಡಿದೆ.
ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಫ್ರಾನ್ಸ್ ಸರ್ಕಾರದ ಜೊತೆ ಮಾಡಿಕೊಳ್ಳಲಾದ ಒಪ್ಪಂದದ ಮಾಹಿತಿಗಳನ್ನು ಹತ್ತು ದಿನಗಳೊಳಗೆ ನೀಡುವಂತೆ ಅ.31 ರಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.
ರಫೇಲ್ ಒಪ್ಪಂದದ ಕೆಲವು ವಿವರಗಳನ್ನು ಸಹ ಸಾರ್ವಜನಿಕ ವೆಬ್‌ಸೈಟ್‌ಗಳಲ್ಲಿ ಬಹಿರಂಗಪಡಿಸಬೇಕು ಮತ್ತು ಯುದ್ಧ ವಿಮಾನ ತಯಾರಿಕಾ ಕಂಪೆನಿಯು ತನ್ನ ಆಫ್‌ಸೆಟ್ ಪಾಲುದಾರರೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ವಿವರಗಳನ್ನು ಒಪ್ಪಂದದ ವಿರುದ್ಧ ಅರ್ಜಿ ಸಲ್ಲಿಸಿರುವ ವ್ಯಕ್ತಿಗಳಿಗೆ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.

ಅ.10 ರಂದು ನಡೆಸಿದ್ದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್, ರಫೇಲ್ ಡೀಲ್ ಗೆ ಸಂಬಂಧಿಸಿದ ಬೆಲೆ ಮತ್ತು ಇತರ ತಾಂತ್ರಿಕ ವಿವರಗಳನ್ನು ಹೊರತುಪಡಿಸಿ, ಉಳಿದ ವಿವರಗಳನ್ನು ನೀಡುವಂತೆ ಸೂಚಿಸಿತ್ತು. ನಂತರ ರಫೇಲ್ ಡೀಲ್ ನ ಬೆಲೆ ವಿವರನ್ನೂ ನೀಡುವಂತೆ ಆದೇಶಿಸಿತ್ತು.
ಫ್ರಾನ್ಸ್ ನೊಂದಿಗೆ ಭಾರತ ಸರ್ಕಾರ ಮಾಡಿಕೊಂಡ ಯುದ್ಧ ವಿಮಾನ ಖರೀದಿ ಒಪ್ಪಂದ, ರಫೇಲ್ ಡೀಲ್ ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ವಿಪಕ್ಷಗಳು ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆಯುತ್ತಿದೆ.












Click it and Unblock the Notifications