ಆಗಸ್ಟಾ ಹಗರಣ : 5 ದಿನಗಳ ಸಿಬಿಐ ಕಸ್ಟಡಿಗೆ ಕ್ರಿಶ್ಚಿಯನ್ ಮೈಕೆಲ್
ನವದೆಹಲಿ, ಡಿಸೆಂಬರ್ 05 : ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ದುಬೈನಿಂದ ಭಾರತಕ್ಕೆ ಕರೆತಂದಿರುವ ಬ್ರಿಟನ್ ನ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ನನ್ನು ವಿಚಾರಣೆಗಾಗಿ ಐದು ದಿನಗಳ ಸಿಬಿಐ ಕಸ್ಟಡಿಗೆ ವಿಶೇಷ ಸಿಬಿಐ ನ್ಯಾಯಾಲಯ ಬುಧವಾರ ನೀಡಿದೆ.
12 ಹೆಲಿಕಾಪ್ಟರ್ ಗಳನ್ನು ಆಂಗ್ಲೋ ಇಟಾಲಿಯನ್ ಕಂಪನಿ ಆಗಸ್ಟಾ ವೆಸ್ಟ್ ಲ್ಯಾಂಡ್ ನಿಂದ 3,600 ಕೋಟಿ ರುಪಾಯಿಗೆ ಖರೀದಿಸಲು ಭಾರತದ ವಾಯುಸೇನೆಯೊಂದಿಗೆ 2010ರಲ್ಲಿ ಒಪ್ಪಂದವಾಗಿತ್ತು. ಇದರಲ್ಲಿ ಈ ಡೀಲ್ ಕುದುರಿಸಲು ಭಾರತದ ರಾಜಕಾರಣಿಗಳಿಗೆ ಲಂಚ ನೀಡಲೆಂದು ಮಧ್ಯವರ್ತಿ ಮೈಕೆಲ್ ಗೆ 225 ಕೋಟಿ ರುಪಾಯಿ ನೀಡಲಾಗಿತ್ತು ಎಂಬುದು ಆರೋಪ.
ಈ ಹಗರಣದಲ್ಲಿ ಸಿಬಿಐ ತನಿಖೆ ನಡೆಸುತ್ತಿದ್ದು, ದುಬೈನಲ್ಲಿ ಎರಡು ಖಾತೆಗಳಲ್ಲಿ ಭಾರೀ ಪ್ರಮಾಣದ ಹಣ ವರ್ಗಾವಣೆಯಾಗಿರುವ ಬಗ್ಗೆ ಸಾಕ್ಷ್ಯವಿರುವುದರಿಂದ ವಿಚಾರಣೆಗೆ 5 ದಿನಗಳ ಕಾಲ ನೀಡಬೇಕೆಂದು ಸಿಬಿಐ ಮನವಿ ಸಲ್ಲಿಸಿತ್ತು. ಜಾಮೀನಿಗೆ ಕ್ರಿಶ್ಚಿಯನ್ ಮೈಕೆಲ್ ಅರ್ಜಿ ಸಲ್ಲಿಸಿದ್ದರೂ, ಮುಂದಿನ ವಿಚಾರಣೆಯಲ್ಲಿ ಪರಿಗಣಿಸುವುದಾಗಿ ಹೇಳಿದ ವಿಶೇಷ ನ್ಯಾಯಾಲಯ, ಸಿಬಿಐಗೆ 5 ದಿನಗಳ ಕಸ್ಟಡಿ ನೀಡಿದೆ.

ಇದಕ್ಕೂ ಮೊದಲು ಬೆಳಗಿನ ಜಾವ 1 ಗಂಟೆ ಮತ್ತು ಸಂಜೆಯ ಸಮಯ 1 ಗಂಟೆ ತಮ್ಮ ವಕೀಲ ಅಲ್ಜೋ ಕೆ ಜೋಸೆಫ್ ಅವರೊಂದಿಗೆ ಮಾತುಕತೆ ನಡೆಸಲು ನ್ಯಾಯಾಲಯ ಕ್ರಿಶ್ಚಿಯನ್ ಮೈಕೆಲ್ ಗೆ ಅನುಮತಿ ನೀಡಿತ್ತು. 5 ದಿನಗಳ ಕಸ್ಟಡಿ ನೀಡಿದ್ದರಿಂದ ವಿಚಾರಣೆಗಾಗಿ ಮೈಕೆಲ್ ನನ್ನು ದೆಹಲಿಯ ಸಿಬಿಐ ಮುಖ್ಯಕಚೇರಿಗೆ ಕರೆತರಲಾಗಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿಚಾರಣೆಯಲ್ಲಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಹಲವಾರು ರಹಸ್ಯಗಳನ್ನು ಬಯಲು ಮಾಡಿದರೂ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ. 2010ರಲ್ಲಿ ಡಾ. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈ ಒಪ್ಪಂದ ಆಗಿತ್ತು, ಆಗ ಹಲವಾರು ನಾಯಕರು ಇದರಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿತ್ತು. 2014ರಲ್ಲಿ ಈ ಒಪ್ಪಂದವನ್ನು ಮೋದಿ ಸರಕಾರ ರದ್ದುಪಡಿಸಿತ್ತು.












Click it and Unblock the Notifications