ನಿಷ್ಠರ ವರ್ಗಾವಣೆ ರದ್ದುಗೊಳಿಸಿದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ
ನವದೆಹಲಿ, ಜನವರಿ 10: ಮೂರು ತಿಂಗಳ ಬಳಿಕ ಸಿಬಿಐ ಮುಖ್ಯಸ್ಥರಾಗಿ ಮರು ನಿಯೋಜನೆಗೊಂಡ ಅಲೋಕ್ ವರ್ಮಾ, ಕಚೇರಿ ಪ್ರವೇಶಿಸಿದ ಮೊದಲ ದಿನವೇ ಮಧ್ಯಂತರ ನಿರ್ದೇಶಕ ಎಂ. ನಾಗೇಶ್ವರ ರಾವ್ ಅವರ ಅನೇಕ ವರ್ಗಾವಣೆ ಆದೇಶಗಳನ್ನು ರದ್ದುಗೊಳಿಸಿದ್ದಾರೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಪಿ ಎಸ್‌ಎಸ್ ಗುರ್ಮ್, ಡೆಪ್ಯುಟಿ ಎಸ್‌ಪಿ ಎ.ಕೆ. ಬಸ್ಸಿ, ಡಿಐಜಿ ಎಂ.ಕೆ. ಸಿನ್ಹಾ ಮತ್ತು ಜಂಟಿ ನಿರ್ದೇಶಕ ಎ.ಕೆ. ಶರ್ಮಾ ಸೇರಿದಂತೆ ಅಲೋಕ್ ವರ್ಮಾ ಅವರ ತಂಡದಲ್ಲಿದ್ದ 10 ಅಧಿಕಾರಿಗಳನ್ನು ನಾಗೇಶ್ವರ ರಾವ್ ವರ್ಗಾವಣೆ ಮಾಡಿದ್ದರು.

ವರ್ಮಾ ಈ ಎಲ್ಲ ಅಧಿಕಾರಿಗಳನ್ನೂ ಮರಳಿ ಅದೇ ಸ್ಥಾನಕ್ಕೆ ನಿಯೋಜನೆ ಮಾಡಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರವನ್ನು ಎದುರಿಸಲು ತಾವು ಸನ್ನದ್ಧರಾಗಿರುವ ಸಂದೇಶ ರವಾನಿಸಿದ್ದಾರೆ. ತಮ್ಮ ನಿಷ್ಠರ ವರ್ಗಾವಣೆಯನ್ನು ರದ್ದುಗೊಳಿಸಿ, ರಾಕೇಶ್ ಅಸ್ಥಾನಾ ವಿರುದ್ಧದ ತನಿಖೆಯನ್ನು ಚುರುಕುಗೊಳಿಸುವ ಸೂಚನೆ ನೀಡಿದ್ದಾರೆ. ವರ್ಮಾ ಅವರ ಅಧಿಕಾರಾವಧಿ ಜನವರಿ 31ರಂದು ಅಂತ್ಯವಾಗಲಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ವರ್ಮಾ ಅವರು ಅಧಿಕಾರಕ್ಕೆ ಮರಳಿದ್ದರೂ, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಆದರೆ, ಎಫ್‌ಐಆರ್ ದಾಖಲು ಮತ್ತು ವರ್ಗಾವಣೆಯ ಕೆಲವು ಕಾರ್ಯಗಳನ್ನು ಮಾಡಬಹುದು.












Click it and Unblock the Notifications