ದೆಹಲಿ ಕಟ್ಟಡ ಕುಸಿತ, ಸಾವಿನ ಸಂಖ್ಯೆ ಏರಿಕೆ
ನವದೆಹಲಿ, ಅ.9: ಇಲ್ಲಿನ ಆಜಾದ್ ಮಾರುಕಟ್ಟೆ ಪ್ರದೇಶದಲ್ಲಿ ಬುಧವಾರ ಮುಂಜಾನೆ ಮೂರಂತಸ್ತಿನ ಕಟ್ಟಡ ಕುಸಿದಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿರುವ ಸಂಖ್ಯೆ ಎರಡಕ್ಕೇರಿದೆ. ಇನ್ನಷ್ಟು ಜನ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಕಂಡು ಬಂದಿದೆ.
ಐದಕ್ಕೂ ಅಧಿಕ ಅಗ್ನಿಶಾಮಕ ದಳ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ಕೂಡಾ ಅಗ್ನಿ ಶಾಮಕದಳ ಸಿಬ್ಬಂದಿ ಜತೆ ಕೈಜೋಡಿಸಿದ್ದಾರೆ.
ಪ್ರತ್ಯಕ್ಷ ದರ್ಶಿಗಳ ಪ್ರಕಾರ, 'ಜೋಡಿಸಿಟ್ಟ ಇಸ್ಪೀಟ್ ಎಲೆ ಉದುರುವಂತೆ ಕಟ್ಟಡ ಮೂರು ಫ್ಲೋರ್ ಕುಸಿಯಿತು. ಮೊದಲಿಗೆ ನಮಗೆ ಭೂಕಂಪ ಆಗಿರಬೇಕು ಎಂದೆನಿಸಿ ಮನೆಯಿಂದ ಹೊರಕ್ಕೆ ಓಡಿ ಬಂದೆವು. ನೋಡಿದರೆ ಕಟ್ಟಡ ಸಂಪೂರ್ಣ ನೆಲಸಮವಾಗಿತ್ತು'.

ಮುಂಜಾನೆ ಬಂದ ಪ್ರಾಥಮಿಕ ವರದಿಯಂತೆ ಒಬ್ಬರು ಮೃತಪಟ್ಟಿದ್ದರು ಹಾಗೂ ಒಬ್ಬರಿಗೆ ತೀವ್ರ ಗಾಯವಾಗಿತ್ತು. ಇದು ನಿರ್ಮಾಣ ಹಂತದ ಕಟ್ಟಡವಾಗಿದ್ದು ಹೆಚ್ಚು ಜನ ಇದರಲ್ಲಿ ನೆಲೆಸಿರಲಿಲ್ಲ. ನವದೆಹಲಿಯ ಭಾಡಾ ಹಿಂದೂರಾವ್ ಪ್ರದೇಶದ ಆಜಾದ್ ಮಾರ್ಕೆಟ್ ನಲ್ಲಿ ಕಟ್ಟಡ ನಿರ್ಮಾಣ ಬಹುದಿನಗಳಿಂದ ನಡೆದಿತ್ತು. ಕಟ್ಟಡದ ಮಾಲೀಕರಿಗಾಗಿ ಹುಡುಕಾಟ ಜಾರಿಯಲ್ಲಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚಿಗೆ ಮುಂಬೈನ ಡಾಕ್ ಯಾರ್ಡ್ ರಸ್ತೆಯಲ್ಲಿರುವ ಐದು ಅಂತಸ್ತಿನ ಕಟ್ಟಡವೊಂದು ಶುಕ್ರವಾರ ಬೆಳಗ್ಗಿನ ಜಾವ ನೆಲಕ್ಕುರುಳಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರ ಪೈಕಿ ಆರವತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಕಳೆದ ಏಪ್ರಿಲ್ ನಲ್ಲಿ ಥಾಣೆಯಲ್ಲಿ ಇದೇ ರೀತಿ ದುರಂತ ಸಂಭವಿಸಿದ್ದು 18 ಮಕ್ಕಳು ಸೇರಿದಂತೆ 74 ಮಂದಿ ಸಾವನ್ನಪ್ಪಿದ್ದರು.
ಈ ಹಿಂದೆ ದೆಹಲಿಯ ಉಸ್ಮಾನಪುರ ಬಳಿಯ ಬ್ರಹ್ಮಪುರಿ ಎಂಬಲ್ಲಿ ಕಟ್ಟಡ ಕುಸಿದು ಆರು ಜನ ಅಸುನೀಗಿದ್ದರು.ಈ ವರ್ಷದ ಆರಂಭದಲ್ಲಿ ಬಹುಮಹಡಿ ಕಟ್ಟಡ ಕುಸಿದುಬಿದ್ದು, ಓರ್ವ ಸಾವಿಗೀಡಾಗಿ, 15 ಜನರು ಗಾಯಗೊಂಡಿದ್ದರು. ಹಳೆ ಕಟ್ಟಡಗಳ ಗಣತಿ ಹಾಗೂ ಪರಿಶೀಲನೆ ನಡೆಸಿರುವುದು ಅಮಾಯಕರ ಜೀವಕ್ಕೆ ಕುತ್ತು ತರುತ್ತಿದೆ. ನಗರ ಪಾಲಿಕೆಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಮಾರಕವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.












Click it and Unblock the Notifications