ಕೇಸು ಹಾಕ್ತಿದ್ದೇನೆ ಆಶೀರ್ವಾದ ಮಾಡಿ ಎಂದ ಕಪಿಲ್ ಮಿಶ್ರಾ!
ಅರವಿಂದ್ ಕೇಜ್ರಿವಾಲ್ ವಿರುದ್ಧ ದೂರು ನೀಡಲು ಮುಂದಾಗಿರುವ ಆಮ್ ಆದ್ಮಿ ಪಕ್ಷದಿಂದ ಅಮಾನತಾದ ಕಪಿಲ್ ಮಿಶ್ರಾ ಕೇಸಿನಲ್ಲಿ ತಾನು ಗೆಲ್ಲಲು ಕೇಜ್ರಿವಾಲರನ್ನೇ ಆಶೀರ್ವಾದ ಕೇಳಿದ್ದಾರೆ
ನವದೆಹಲಿ, ಮೇ 9: ಅಮಾನತಾಗಿರುವ ಆಮ್ ಆದ್ಮಿ ಪಕ್ಷದ ಕಪಿಲ್ ಮಿಶ್ರಾಗೆ ಎಲ್ಲಿ ಬೆಂಕಿ ಹಾಕಿದರೆ, ಹೇಗೆ ಹೊತ್ತಿ ಉರಿಯುತ್ತದೆ ಎಂಬುದು ಚೆನ್ನಾಗಿ ಗೊತ್ತಿರುವಂತಿದೆ. ಅಥವಾ ಹೀಗೆ ಮಾಡಿದರೆ ಇಷ್ಟೆಲ್ಲ ಹಿಂಸೆ ಮಾಡಬಹುದು ಎಂದು ಹಿಂದಿನಿಂದ ಯಾರಾದರೂ ಐಡಿಯಾ ಕೂಡ ಕೊಡುತ್ತಿರಬಹುದು. ಈ ಮಿಶ್ರಾ ಯಾರು ಗೊತ್ತಾ?
ಅದೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವುದು ಇದೇ ಮಿಶ್ರಾ. ಇದೀಗ ಕೇಜ್ರಿವಾಲ್ ರ ವಿರುದ್ಧವೇ ಪೊಲೀಸರಿಗೆ ದೂರು ನೀಡುವ ಮುನ್ನ ನಾಟಕೀಯ ಬೆಳವಣಿಗೆ ಎಂಬಂತೆ ಆಶೀರ್ವಾದ ಕೇಳಿದ್ದಾರೆ. ಮತ್ತು "ನನ್ನ ಜೀವನದ ಅತಿ ದೊಡ್ಡ ಹೆಜ್ಜೆ ತೆಗೆದುಕೊಳ್ಳುತ್ತಿದ್ದೀನಿ" ಅದಕ್ಕಾಗಿ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.[ಸಿಬಿಐಗೆ ಕಪಿಲ್ ಮಿಶ್ರಾ ದೂರು, ಕೇಜ್ರಿ ಮನೆ ಮುಂದೆ ಬಿಜೆಪಿ ಪ್ರತಿಭಟನೆ]
ಕೇಜ್ರಿವಾಲ್ ಗೆ ಬರೆದ ಬಹಿರಂಗ ಪತ್ರವನ್ನು ಓದಿರುವ ಮಿಶ್ರಾ, ನಿಮಗೆ ಸತ್ಯ ಗೊತ್ತಿದೆ. ನನಗೆ ಗೊತ್ತಿದೆ ನೀವು ನನ್ನ ಮೇಲೆ ದಾಳಿ ಮಾಡುತ್ತೀರಿ. ಸುಳ್ಳು-ಮೋಸದ ಚಕ್ರವ್ಯೂಹದಲ್ಲಿ ನನ್ನನ್ನು ಸಿಲುಕಿಸಲು ಪ್ರಯತ್ನಿಸುತ್ತೀರಿ" ಎಂದಿದ್ದಾರೆ. ಅರವಿಂದ್ ಕೇಜ್ರಿವಾಲ್ ಮೇಲೆ ಮಿಶ್ರಾ ಲಂಚ ಪಡೆದ ಆರೋಪ ಮಾಡಿದ್ದಾರೆ.
ಮೌನ ಮುರಿದಿರುವ ಕೇಜ್ರಿವಾಲ್, ಸತ್ಯ ಬಯಲಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಒಂದು ದಿನದ ವಿಶೇಷ ಅಧಿವೇಶನವನ್ನು ದೆಹಲಿಯಲ್ಲಿ ಕರೆಯುವುದಾಗಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇಡೀ ಪ್ರಹಸನದ ಹತ್ತು ಪ್ರಮುಖ ಅಂಶಗಳು ಹೀಗಿವೆ.[ಹಗರಣಗಳ ಆರೋಪ: ಕೊನೆಗೂ ಮೌನ ಮುರಿದ ಕೇಜ್ರಿವಾಲ್]

ಎರಡು ಕೋಟಿ ರುಪಾಯಿ ಲಂಚ
ಅರವಿಂದ್ ಕೇಜ್ರಿವಾಲ್ ಅವರ ಮನೆಯಲ್ಲೇ ಮತ್ತೊಬ್ಬ ಸಚಿವ ಸತ್ಯೇಂದ್ರ ಜೈನ್ ನಿಂದ ಎರಡು ಕೋಟಿ ರುಪಾಯಿ ಲಂಚ ಪಡೆಯುವುದನ್ನು ನಾನು ನೋಡಿದ್ದೇನೆ. ಈ ಬಗ್ಗೆ ಸಿಬಿಐಗೆ ಅಧಿಕೃತ್ ದೂರು ದಾಖಲಿಸುತ್ತೇನೆ ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ

ಕೇಜ್ರಿವಾಲ್ ಗೆ ಸವಾಲು
ಕಪಿಲ್ ಮಿಶ್ರಾ ಆರೋಪ ಮಾಡಿದ ನಂತರ ಆಮ್ ಆದ್ಮಿ ಪಕ್ಷದಿಂದ ಸೋಮವಾರ ಅಮಾನತು ಮಾಡಲಾಗಿದೆ. ಕೇಜ್ರಿವಾಲ್ ವಿರುದ್ಧ ಚುನಾವಣೆ ಸ್ಪರ್ಧಿಸುವುದಾಗಿ ಮಂಗಳವಾರ ಮಿಶ್ರಾ ಸವಾಲು ಹಾಕಿದ್ದಾರೆ.

ಮೂರು ಎಫ್ ಐಆರ್
ಮೂರು ಎಫ್ ಐಆರ್ ದಾಖಲಿಸುವುದಾಗಿ ಮಿಶ್ರಾ ಹೇಳಿದ್ದಾರೆ. ಒಂದು, ಕೇಜ್ರಿವಾಲ್-ಜೈನ್ ಮಧ್ಯೆ ನಡೆದ ನಗದು ವ್ಯವಹಾರ, ಇನ್ನೊಂದು, ಕೇಜ್ರಿವಾಲ್ ಹತ್ತಿರದ ಸಂಬಂಧಿಗೆ ಜೈನ್ ಅಕ್ರಮ ಭೂ ವ್ಯವಹಾರದಲ್ಲಿ ಹೇಗೆ ಅನುಕೂಲ ಮಾಡಿಕೊಟ್ಟರು ಎಂಬ ಬಗ್ಗೆ.

ಅಕ್ರಮ ಹಣದಲ್ಲಿ ವಿದೇಶ ಪ್ರವಾಸ
ಮೂರನೆಯ ದೂರಿನಲ್ಲಿ ಆಪ್ ಮುಖಂಡರಾದ ಜೈನ್, ಆಶಿಶ್ ಖೇತಾನ್ ಹಾಗೂ ಸಂಜಯ್ ಸಿಂಗ್ ಅಕ್ರಮ ಹಣದಲ್ಲಿ ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ ಎನ್ನಲಾಗಿದೆ

ನಿಂದಿಸಿದವರೇ ತನಿಖೆ ಮಾಡ್ತಾರೆ
ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೋಮವಾರ ಮಿಶ್ರಾ ದೂರು ನೀಡಿದ್ದಾರೆ. ಅಂದಹಾಗೆ ಆಪ್ ದೆಹಲಿಯಲ್ಲಿ ಅಧಿಕಾರ ಹಿಡಿದಾಗಿನಿಂದ ಎಸಿಬಿಯನ್ನು ಗುರಿ ಮಾಡಿಕೊಂಡು ದಾಳಿ ನಡೆಸುತ್ತಿತ್ತು.

ಅಧಿಕೃತ ದೂರು ಬಂದಿಲ್ಲ
ಮಿಶ್ರಾ ಸಾರ್ವಜನಿಕವಾಗಿ ದೂರು ನೀಡಿದ ಬಗ್ಗೆ ಹೇಳಿದ್ದರೂ ಎಎಪಿ ಜತೆಗಿನ ತಿಕ್ಕಾಟದಿಂದಲೇ ಸಾರ್ವಜನಿಕವಾಗಿ ಹೆಸರಾಗಿರುವ ಭ್ರಷ್ಟಾಚಾರ ನಿಗ್ರಹ ದಳ ಮುಖ್ಯಸ್ಥ ಮುಕೇಶ್ ಮೀನಾ, ತನಗೆ ಅಧಿಕೃತವಾಗಿ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ

ಐವತ್ತು ಕೋಟಿ ರುಪಾಯಿ ವ್ಯವಹಾರ
ಕೇಜ್ರಿವಾಲ್ ರ ಭಾವಮೈದುನನಿಗೆ ಐವತ್ತು ಕೋಟಿ ರುಪಾಯಿ ವ್ಯವಹಾರದಲ್ಲಿ ಸಹಾಯ ಮಾಡಿರುವುದಾಗಿ ಸತ್ಯೇಂದ್ರ ಜೈನ್ ನನಗೆ ತಿಳಿಸಿದ್ದರು ಎಂದು ಮಿಶ್ರಾ ಸೋಮವಾರ ಹೇಳಿದ್ದಾರೆ

ಅಂತ್ಯಸಂಸ್ಕಾರ ಆಗಿ ಎರಡು ಗಂಟೆ ಕಳೆದಿಲ್ಲ
ಕೇಜ್ರಿವಾಲ್ ಸಂಬಂಧಿ ಹೆಸರು ಹೇಳುತ್ತಿದ್ದ ಹಾಗೆ ಆಪ್ ನಿಂದ ಮಿಶ್ರಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈಗ ಮಿಶ್ರಾ ಹೇಳುತ್ತಿರುವ ವ್ಯಕ್ತಿ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. "ಸ್ವಲ್ಪವಾದರೂ ಮಾನವೀಯತೆ ಇರಲಿ. ಅಂತ್ಯಸಂಸ್ಕಾರ ಮಾಡಿ ಎರಡು ಗಂಟೆ ಕೂಡ ಕಳೆದಿಲ್ಲ. ಅಂಥ ವ್ಯಕ್ತಿ ವಿರುದ್ಧ ಆರೋಪ ಮಾಡ್ತಿದ್ದೀರಿ" ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಆ ದಿನ ಕೇಜ್ರಿವಾಲ್ ಮನೆಯಲ್ಲಿ ಇರಲಿಲ್ಲ
ಕಪಿಲ್ ಮಿಶ್ರಾ ಆರೋಪವನ್ನು ಸಚಿವ ಸತ್ಯೇಂದ್ರ ಜೈನ್ ನಿರಾಕರಿಸಿದ್ದಾರೆ. ಹಣ ನೀಡಲಾಗಿದೆ ಎಂದು ಆರೋಪ ಮಾಡುತ್ತಿರುವ ದಿನಾಂಕದಂದು ಕೇಜ್ರಿವಾಲ್ ಮನೆಯಲ್ಲಿ ನಾನು ಇರಲೇ ಇಲ್ಲ ಎಂದು ಅವರು ಹೇಳಿದ್ದಾರೆ.

ಸಚಿವ ಸ್ಥಾನದಿಂದ ತೆಗೆದ ಮೇಲಿನ ವರಸೆ
ಸಚಿವ ಸ್ಥಾನದಿಂದ ತೆಗೆದುಹಾಕಿದ ನಂತರ ಕಪಿಲ್ ಮಿಶ್ರಾ ಆಧಾರರಹಿತವಾದ ಆರೋಪ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ












Click it and Unblock the Notifications