ಬಿಜೆಪಿಯಿಂದ ಶಾಸಕರ ಖರೀದಿಗೆ ಕೋಟಿ ಡೀಲ್
ನವದೆಹಲಿ, ಸೆ.8: ಭಾರತೀಯ ಜನತಾ ಪಕ್ಷ(ಬಿಜೆಪಿ) ಆಮ್ ಆದ್ಮಿ ಪಕ್ಷದ(ಎಎಪಿ) ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷದ ಮುಖಂಡರು ಮಾಡಿರುವ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ಎಎಪಿ ಶಾಸಕರನ್ನು ಖರೀದಿಸಲು ಕುದುರೆ ವ್ಯಾಪಾರ ಆರಂಭಿಸಿರುವ ಬಿಜೆಪಿ ಕೋಟಿಗಟ್ಟಲೆ ಹಣ ವ್ಯಯಿಸುತ್ತಿದೆ ಎಂದು ವಿಡಿಯೋ ಸಾಕ್ಷಿ ಸಮೇತ ಆರೋಪ ಕೇಳಿ ಬಂದಿತ್ತು.
ಬಿಜೆಪಿ ಕುದುರೆ ವ್ಯಾಪಾರ ಕುರಿತಂತೆ ವಿಡಿಯೋ ಬಿಡುಗಡೆಗೊಳಿಸಿದ ಕೇಜ್ರಿವಾಲ್, ದೆಹಲಿಯಲ್ಲಿ ಸರ್ಕಾರ ರಚಿಸುವ ಸಲುವಾಗಿ ಬಿಜೆಪಿ ಶಾಸಕ ಶೆರ್ ಸಿಂಗ್ ಡಾಗರ್ ಎಎಪಿ ಶಾಸಕನಿಗೆ ಬೆಂಬಲ ನೀಡುವಂತೆ ಕೋರಿ ಹಣದ ಆಮಿಷವೊಡ್ಡಿರುವ ವೀಡಿಯೋವನ್ನು ಬಹಿರಂಗಗೊಳಿಸಿದ್ದಾರೆ. ಎಎಪಿ ಶಾಸಕ ದಿನೇಶ್ ಮೊಹನಿಯಾ ಅವರ ಬೆಂಬಲಕ್ಕೆ 4 ಕೋಟಿ ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಅವರು ದೂರಿದ್ದಾರೆ.

ಎಎಪಿ ಶಾಸಕನಿಗೆ ಲಂಚ ನೀಡಿ, ಖರೀದಿಸುವ ಪ್ರಯತ್ನದಲ್ಲಿರುವ ಬಿಜೆಪಿ ಹೀನಾಯ ಕೆಲಸ ಮಾಡುತ್ತಿದೆ. ಆದರೆ, ಎಎಪಿನಲ್ಲಿರುವ ನಾಯಕರು ಪ್ರಾಮಾಣಿಕರು ಎಂದು ಬಿಜೆಪಿಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ಇನ್ನಾದರೂ ಬಿಜೆಪಿ ರೇಸ್ ಕುದರೆಗಳನ್ನು ಖರೀದಿಸುವ ರಾಜಕೀಯ ತಂತ್ರವನ್ನು ಬಿಟ್ಟುಬಿಡಲಿ. ಏಕೆಂದರೆ ಎಲ್ಲರೂ ಮಾರಾಟಕ್ಕಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಆಮ್ ಆದ್ಮಿಗಳಿಗೆ ಬೆಂಬಲ ವ್ಯಕತಪಡಿಸುವಂತೆ ಹೇಳಿಕೆ ನೀಡಿರುವ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಮಾತನಾಡಿ, ಕಾಂಗ್ರೆಸ್ ಶಾಸಕರಿಗೂ ಬಿಜೆಪಿ ಇದೇ ರೀತಿ ಆಮಿಷ ಒಡ್ಡಿದೆ ಎಂದಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು 49 ದಿನಗಳ ರಾಜ್ಯಭಾರ ನಂತರ ಫೆ.14 ರಿಂದ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ನಡೆದಿದೆ.












Click it and Unblock the Notifications