ಅಂಕುಶಂ ರಾಜಶೇಖರ್ ದಂಪತಿ ಬಿಜೆಪಿಗೆ ಅಂಕಿತ

ಅತ್ತ ಆಂಧ್ರದಲ್ಲಿ ರಾಜಕೀಯವೆಂಬುದು ಅಕ್ಷರಶಃ ಚಿತ್ರಾನ್ನವಾಗಿದೆ. ಕಾಂಗ್ರೆಸ್ ಅದೆಲ್ಲಿದೆಯೋ, ಅದಕ್ಕೆ ಬೆಂಬಲ ನೀಡುತ್ತಿರುವ ನಟ ಚಿರಂಜೀವಿಯ ಪ್ರಜಾ ರಾಜ್ಯಂ ಹಳ್ಳ ಹಿಡಿದು ಯಾವ ಕಾಲವಾಯಿತೋ, ಚಂದ್ರಬಾಬು ನಾಯ್ಡು ಸ್ವಯಂಕೃತಾಪರಾಧಗಳಿಂದಾಗಿ ಪಶ್ಚಾತಾಪದ ಮೋಡ್ ನಲ್ಲಿರುವಾಗ, ಜಗನ್ ಮೋಹನ್ ರೆಡ್ಡಿ ಎಂಬ ವೈಎಸ್ಸಾರ್ ಕರೆನ್ಸಿಯನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಹರಸಾಹಸ ಪಡುತ್ತಿರುವುದರ ಮಧ್ಯೆ ತೆಲಂ'ಗಾನ' ಕರ್ಕಶವಾಗಿ ಕೇಳಿಬರುತ್ತಿರುವಾಗ ರಾಜಶೇಖರ್- ಜೀವಿತಾ ದಂಪತಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಕುತೂಹಲಕಾರಿಯಾಗಿದೆ.
ಕಾಂಗ್ರೆಸ್ ಸೇರ್ತಾರಂತೆ, ವೈಎಸ್ಸಾರ್ ಕಾಂಗ್ರೆಸ್ ಸೇರೇಬಿಟ್ರಂತೆ, ಇಲ್ಲ ಇಲ್ಲ ಕಳೆದ ವರ್ಷವೇ ಕಾಂಗ್ರೆಸ್ ಸೇರಿ ಬಿಟ್ಟಿದ್ದರು ಎಂಬ ಮಾತುಗಳ ಮಧ್ಯೆ ರಾಜಶೇಖರ್- ಜೀವಿತಾ ದಂಪತಿ ರಾಜಕೀಯವಾಗಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ.
ಇನ್ನು ಇತ್ತ ಬಿಜೆಪಿ ಸ್ಥಿತಿಯತ್ತ ನೋಡಿದರೆ ದಿನೇ ದಿನೆ ಪಕ್ಷವು ತಾರಾವರ್ಚಸ್ಸನ್ನು ಗಳಿಸಿಕೊಳ್ಳುತ್ತಿದೆ. ರಾಜಕಾರಣಿಯಾಗಿ ಕೇಂದ್ರದಲ್ಲಿ ಮಂತ್ರಿ ಸ್ಥಾನವನ್ನೂ ಅಲಂಕರಿಸಿದ್ದ ಹಿರಿಯ ನಟ ಕೃಷ್ಣಂ ರಾಜು ಬಿಜೆಪಿಗೆ ಸೇರ್ಡಪೆಯಾಗಿದ್ದಾರೆ. ಇನ್ನು ಸಲ್ಮಾನ್ ಖಾನ್ ಅವರಂತೂ ಮೋದಿಗೆ ಉಘೇ ಉಘೇ ಅನ್ನುತ್ತಲೇ ಇದ್ದಾರೆ.
ಮೋದಿ ಜತೆಗೂಡಿ ಗಾಳಿಪಟ ಹಾರಿಸಿದ್ದ ಸಲ್ಮಾನ್ ಖಾನ್ ಗೋಧ್ರಾ ಹತ್ಯಾಕಾಂಡದಲ್ಲಿ ಮೋದಿ ಕೈವಾಡವಿಲ್ಲವೆಂದು ಸ್ವತಃ ಕೋರ್ಟೇ ಹೇಳಿರುವುದರಿಂದ ಮೋದಿ ಸಾರಿ ಕೇಳುವ ಜರೂರತ್ತು ಇಲ್ಲ ಎಂದು ಮೋದಿಯನ್ನು ಸಮರ್ಥಿಸಿಕೊಂಡು ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಗೆ ಮತ್ತಷ್ಟು ಬಲ ತುಂಬಿದ್ದಾರೆ.
2014ರ ಲೋಕಸಭಾ ಚುನಾವಣೆಯತ್ತ ಬಿಜೆಪಿ ಸ್ಪಷ್ಟ ಗುರಿ ಹೊಂದಿದೆ. ತಾವೂ ಸಹ ಬಿಜೆಪಿ ಗೆಲುವಿಗೆ ಅಹಿರ್ನಿಶಿ ದುಡಿಯುವುದಾಗಿ ರಾಜಶೇಖರ್- ಜೀವಿತಾ ದಂಪತಿ ಹೇಳಿದ್ದಾರೆ.












Click it and Unblock the Notifications