ಅರ್ಚಕನಿಂದ ಗರ್ಭಿಣಿ ಮೇಲೆ ಅತ್ಯಾಚಾರ ಯತ್ನ; ಬಂಧನ

ಹಿಂದೂಗಳ ಅತ್ಯಂತ ಪವಿತ್ರ ಸ್ಥಳವಾದ ಉತ್ತರಾಕಾಂಡದ ಬದರೀನಾಥ ದೇಗುಲದಲ್ಲಿ ಅರ್ಚಕನಾಗಿರುವ ವ್ಯಕ್ತಿ 28 ವರ್ಷದ ಗರ್ಭಿಣಿಯ ಮೇಲೆ ಕಾಕದೃಷ್ಟಿ ಬೀರಿದ ಆರೋಪ ಹೊತ್ತಿದ್ದಾನೆ. ಸೋಮವಾರ ದಿಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ದಕ್ಷಿಣ ದೆಹಲಿಯ ಹೋಟೆಲೊಂದರಲ್ಲಿ ಕುಡಿದ ಮತ್ತಿನಲ್ಲಿ ಆರೋಪಿ ಅರ್ಚಕ, 38 ವರ್ಷದ ರಾವಳ ಕೇಶ್ವಾನಾ ನಂಬೂದಿರಿ ಈ ಕುಕೃತ್ಯಕ್ಕೆ ಯತ್ನಿಸಿದ್ದಾನೆ. ಆತನಿಗೆ ಸಾಥ್ ನೀಡಿದ ಸೋದರ ಸಂಬಂಧಿ ವಿಷ್ಣು ಪ್ರಕಾಶನನ್ನೂ ಪೊಲೀಸರು ಬಂಧಿಸಿದ್ದಾರೆ. 2002ರಿಂದ ನಂಬೂದಿರಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬದರೀನಾಥ ದೇವಸ್ಥಾನದ ಆಡಳಿತ ಮಂಡಳಿಯು ರಾವಳ ಕೇಶ್ವಾನಾ ನಂಬೂದಿರಿಯನ್ನು ಕೆಲಸದಿಂದ ತೆಗೆದುಹಾಕಿದೆ.
ಮಹಿಳೆಯನ್ನು ಅಕ್ರಮವಾಗಿ ಬಂಧಿಸಿ, ಆಕೆಯ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಂಡ ಆರೋಪದ ಮೇಲೆ ಪೊಲೀಸರು ಇವರಿಬ್ಬರನ್ನೂ ಬಂಧಿಸಿದ್ದಾರೆ.
ಮಹ್ರೌಲಿಯ ಡಿಲೈಟ್ ಹೋಟೆಲಿನಲ್ಲಿ ಸೋಮವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಪೂಜೆ ನಡೆಸಬೇಕಿದೆ, ಹೋಟೆಲಿಗೆ ಬಾ ಎಂದು ಆರೋಪಿ ಅರ್ಚಕ ಮಹಿಳೆಗೆ ಆಹ್ವಾನ ನೀಡಿದ್ದ. ಅಂದಹಾಗೆ ಮಹಿಳೆಯ ಅಪ್ಪನ ಮೂಲಕ ಮಹಿಳೆಗೆ ಅರ್ಚಕನ ಪರಿಚಯವಾಗಿತ್ತು.
ಇಷ್ಟವಿಲ್ಲದಿದ್ದರೂ ಹೋಟೆಲ್ ರೂಮಿಗೆ ತೆರಳಿದ ಮಹಿಳೆ ಮೇಲೆ ಅರ್ಚಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನಲಾಗಿದೆ. ಸಂಬಂಧಿ ಪ್ರಕಾಶನನ್ನು ಹೊರಗೆ ಕಾವಲು ಕಾಯುವಂತೆ ಹೇಳಿದ ಅರ್ಚಕ ರಾವಳ ಕೇಶ್ವಾನಾ ನಂಬೂದಿರಿ, ಆಕೆಯ ಮೇಲೆ ಮಗುಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊನೆಗೆ ಸಾಹಸಪಟ್ಟು ಸ್ಥಳದಿಂದ ಕಾಲ್ಕಿತ್ತ ಮಹಿಳೆ ಸೀದಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.
ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪಾನಮತ್ತ ಇಬ್ಬರೂ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮಧ್ಯೆ, ಮಹಿಳೆಗೆ ಒಂದೇ ಸಮನೆ ಫೋನ್ ಮಾಡಿದ್ದ ಅರ್ಚಕ ತನ್ನನ್ನು ಕ್ಷಮಿಸುವಂತೆ ಮಹಿಳೆಯನ್ನು ಗೋಗರೆದಿದ್ದಾನೆ.












Click it and Unblock the Notifications