ಲೋಕಸಭಾ ಚುನಾವಣೆಗೆ ಸಜ್ಜಾದ ಕೇಜ್ರಿವಾಲ್, ಬಿಜೆಪಿ ಗಡಗಡ?!
Recommended Video

ನವದೆಹಲಿ, ಅಕ್ಟೋಬರ್ 22: ದೆಹಲಿ ಮುಖ್ಯಮಂತ್ರಿ ಅವರವಿಂದ್ ಕೇಜ್ರಿವಾಲ್ 2019 ರ ಲೋಕಸಭೆ ಚುನಾವಣೆಗೆ ಮನೆ ಮನೆ ಪ್ರಚಾರ ಆರಂಭಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಅತ್ಯುತ್ತಮ ಸಾಧನೆ ತೋರುವ ಹುಮ್ಮಸ್ಸಿನಲ್ಲಿರುವ ಎಎಪಿ(ಆಮ್ ಆದ್ಮಿ ಪಕ್ಷ) 3000 ತಂಡಗಳನ್ನು ಮಾಡಿಕೊಂಡು ನಾಲ್ಕು ತಿಂಗಳಿನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ನಿರ್ಧರಿಸಿದೆ.
ಮುಂಬರುವ ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಎಪಿ ಮಹಾಮೈತ್ರಿಕೂಟದೊಂದಿಗೆ ಗುರುತಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತವಾಗಿರುವ ಎಎಪಿ ಲೋಕಸಭಾ ಚುನಾವಣೆಯಲ್ಲಿ ಅತ್ಯುತ್ತಮ ಸಾಧನೆ ತೋರಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವ ಉದ್ದೇಶ ಹೊಂದಿದೆ.

ಎಎಪಿ ಸಾಧನೆಯಿಂದ ದೆಹಲಿ ಜನರಿಗೆ ತೃಪ್ತಿ
ದೆಹಲಿಯ ಜನರು ಆರೋಗ್ಯ, ಶಿಕ್ಷಣ, ನೀರು ಮತ್ತು ವಿದ್ಯುತ್ ಮುಂತಾದ ಸೌಲಭ್ಯದ ವಿಷಯದಲ್ಲಿ ಸರ್ಕಾರದ ಸಾಧನೆಯ ಬಗ್ಗೆ ತೃಪ್ತಿ ಹೊಂದಿದ್ದಾರೆ ಎಂದು ಈ ಸಂದರ್ಭದಲ್ಲಿ ಕೇಜ್ರಿವಾಲ್ ಹೇಳಿದರು.
ಕಳೆದ 70 ವರ್ಷಗಳಲ್ಲಿ ರಾಜಧಾನಿಯಲ್ಲಿ ಆಗಿರದ ಕ್ರಾಂತಿಕಾರೀ ಬದಲಾವಣೆಯನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಂದಿದೆ ಎಂದರು.

ಬಿಜೆಪಿ ಏನು ಮಾಡುತ್ತಿದೆ?
ದೆಹಲಿಯಿಂದ ಏಳು ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಅವರಿಂದ ದೆಹಲಿಗೆ ಏನು ಸಿಕ್ಕಿದೆ? ಅವರು ಎಂದಿಗೂ ದೆಹಲಿ ಜನರ ಉದ್ಧಾರಕ್ಕಾಗಿ ಕೆಲಸ ಮಾಡಿಲ್ಲ. ಅವರು ಮಾಡುತ್ತಿರುವುದು ಏನೆಂದರೆ, 'ನಾವು ಉತ್ತಮ ಕೆಲಸ ಮಾಡುವುದಕ್ಕೆ ಹೋದರೆ ಅದಕ್ಕೆ ಕಲ್ಲು ಹಾಕುವುದು' ಎಂದು ಅವರು ವ್ಯಂಗ್ಯವಾಗಿ ಹೇಳಿದರು.
ಆಮ್ ಆದ್ಮಿ ಪಕ್ಷದ ದೇಣಿಕೆ ಅಭಿಯಾನದ ಬಗ್ಗೆ ಮಾತನಾಡಿದ ಅವರು, 'ನಿಮ್ಮ ದೇಣಿಗೆಯಿಂದಲೇ ರಾಷ್ಟ್ರ ನಿರ್ಮಾಣ' ಎಂದರು.

ಮಿಷನ್ 25 ಟಾರ್ಗೆಟ್!
ಆಮ್ ಆದ್ಮಿ ಪಕ್ಷವು ಈ ಭಾರಿ 100 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಲೋಕಸಭಾ ಅಖಾಡಕ್ಕಿಳಿಸುವ ಇಂಗಿತ ಹೊಂದಿದೆ. ಅವುಗಳಲ್ಲಿ ಕನಿಷ್ಠ 25 ಜನರನ್ನಾದರೂ ಗೆಲ್ಲಿಸುವುದು ಎಎಪಿಯ ಟಾರ್ಗೆಟ್. ದೆಹಲಿ, ಹರ್ಯಾಣ ಮತ್ತು ಪಂಜಾಬ್ ಗಳು ಎಎಪಿಯ ಮುಖ್ಯ ಗುರಿಯಾಗಿದ್ದು, ಅದರೊಂದಿಗೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ಬಿಹಾರ, ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳಲ್ಲೂ ಎಎಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಇರಾದೆ ಹೊಂದಿದೆ.

ಯಶವಂತ್ ಸಿನ್ಹಾಗೆ ಆಫರ್?
ಬಿಜೆಪಿಯ ಬಂಡಾಯ ನಾಯಕ, ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರಿಗೆ ಲೋಕಸಭೆ ಟಿಕೆಟ್ ನೀಡುವ ಆಫರ್ ಅನ್ನು ಆಮ್ ಆದ್ಮಿ ಪಕ್ಷ ನೀಡಿದೆ. ಅಷ್ಟೇ ಅಲ್ಲದೆ, ಬಿಜೆಪಿಯ ಇನ್ನೋರ್ವ ಬಂಡಾಯ ನಾಯಕ ಶತ್ರುಘ್ನ ಸಿನ್ಹಾ ಅವರಿಗೂ ದೆಹಲಿ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಲು ಆಫರ್ ನೀಡಲಾಗಿದೆ.

ಮಹಾಮೈತ್ರಿಕೂಟಕ್ಕೆ ಬೆಂಬಲವಿಲ್ಲ?!
ಬಿಜೆಪಿಯನ್ನು ಸೋಲಿಸಲು ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ನೇತೃತ್ವದ ಸಂಭಾವ್ಯ ಮಹಾಮೈತ್ರಿಕೂಟಕ್ಕೆ ತಾವು ಬೆಂಬಲ ನೀಡುವುದಿಲ್ಲ ಎಂದು ಈಗಾಗಲೇ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ. ಮಹಾಮೈತ್ರಿಕೂಟದಲ್ಲಿರುವ ಯಾರಿಗೂ ದೇಶದ ಅಭಿವೃದ್ಧಿಯ ಬಗ್ಗೆ ಕಾಳಜಿಯಿಲ್ಲ, ರಾಜಕೀಯ ಹಿತಾಸಕ್ತಿಗಾಗಿ ನಿರ್ಮಾಣವಾಗುವ ಇಂಥ ಮೈತ್ರಿಕೂಟದೊಂದಿಗೆ ತಾನು ಖಂಡಿತವಾಗಿಯೂ ಗುರುತಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದರು.ಕಳೆದ ಲೋಕಸಭಾ ಚುನಾವಣೆಯಲ್ಲಿ(2014) ಒಟ್ಟು 432 (523) ಸೀಟುಗಳಲ್ಲಿ ಸ್ಪರ್ಧಿಸಿದ್ದ ಎಎಪಿ ಕೇವಲ 4 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications