ಮಾನನಷ್ಟ ಕೇಸ್ : ತಿಹಾರ್ ಜೈಲಿಗೆ ಅರವಿಂದ್ ಕೇಜ್ರಿವಾಲ್
ನವದೆಹಲಿ, ಮೆ.21: ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ. ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗುತ್ತಿದೆ.
ಬಿಜೆಪಿ ಮುಖಂಡ ನಿತಿನ್ ಗಡ್ಕರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪವನ್ನು ಅರವಿಂದ್ ಎದುರಿಸುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಬಾಂಡ್ ಸಲ್ಲಿಸಲು ನಿರಾಕರಿಸಿದ ಕಾರಣ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಪಟಿಯಾಲ ಹೌಸ್ ಕೋರ್ಟ್ ಆದೇಶ ನೀಡಿದೆ.
ನಿತಿನ್ ಗಡ್ಕರಿ ವಿರುದ್ಧ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗಾಗಿ ಕೋರ್ಟಿಗೆ ಹಾಜರಾಗುವಂತೆ ಕೇಜ್ರಿವಾಲ್ ಗೆ ಸಮನ್ಸ್ ನೀಡಲಾಗಿತ್ತು. ಅದರಂತೆ, ಬುಧವಾರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೋಮತಿ ಮನೋಚಾ ಅವರ ಮುಂದೆ ಅರವಿಂದ್ ಹಾಜರಾಗಿದ್ದರು.

ಆದರೆ, ವಿಚಾರಣೆ ವೇಳೆ ಅರವಿಂದ್ ಕೇಜ್ರಿವಾಲ್ ವೈಯಕ್ತಿಕ ಜಾಮೀನು ಪಡೆಯಲು ನೀಡಬೇಕಾಗಿರುವ ಬೇಲ್ ಬಾಂಡ್ (ಈ ಪ್ರಕರಣದಲ್ಲಿ 10 ಸಾವಿರ ರು ಮೌಲ್ಯದ ಬಾಂಡ್) ನೀಡಲು ನಿರಾಕರಿಸಿದರು. ಇದೊಂದು ರಾಜಕೀಯ ದುರುದ್ದೇಶದಿಂದ ಕೂಡಿರುವ ಪ್ರಕರಣ ನಾನು ಬಾಂಡ್ ನೀಡುವುದಿಲ್ಲ ಎಂದುಬಿಟ್ಟರು. ಅರವಿಂದ್ ಪರ ವಕೀಲ ಪ್ರಶಾಂತ್ ಭೂಷಣ್ ಕೂಡಾ ಈ ಸಮಯದಲ್ಲಿ ವಿಚಲಿತರಾದರು ಎಂದು ತಿಳಿದುಬಂದಿದೆ.
"ನಾನು ಏನೂ ತಪ್ಪು ಮಾಡಿಲ್ಲ, ನಾನು ಜಾಮೀನು ಕೋರುವುದಿಲ್ಲ, ನಾನು ಜೈಲಿಗೆ ಹೋಗಲು ರೆಡಿ" ಎಂದು ಅರವಿಂದ್ ಕೇಜ್ರಿವಾಲ್ ಘೋಷಿಸಿದರು. ನಂತರ ಅರವಿಂದ್ ಪರ ವಾದಿಸಿದ ಪ್ರಶಾಂತ್ ಭೂಷಣ್ ಹಾಗೂ ರಾಹುಲ್ ಮೆಹ್ರಾ ಅವರು ವೈಯಕ್ತಿಕ ಬಾಂಡ್ ನೀಡುವುದು ಆಮ್ ಆದ್ಮಿ ಪಕ್ಷದ ಸಿದ್ಧಾಂತಕ್ಕೆ ವಿರೋಧವಾಗಿದೆ ಹಾಗಾಗಿ ಕೇಜ್ರಿವಾಲ್ ಅವರು ಬಾಂಡ್ ನೀಡುತ್ತಿಲ್ಲ ಎಂದರು.
ನಿಯಮಗಳನ್ನು ಪಾಲಿಸದ ನಿಮಗೆ ವಿಶೇಷ ಮರ್ಯಾದೆ ನೀಡಬೇಕೆ ಎಂದು ಪ್ರಶ್ನಿಸಿದ ನ್ಯಾ. ಗೋಮತಿ ಅವರು ಮೇ. 23ರ ತನಕ ನ್ಯಾಯಾಂಗ ಬಂಧನ ವಿಧಿಸಿದರು. ಅರವಿಂದ್ ಕೇಜ್ರಿವಾಲ್ ಅವರು ಈಗ ತಿಹಾರ್ ಜೈಲಿಗೆ ರವಾನೆಯಾಗಲಿದ್ದಾರೆ.
For bail you need to submit bail bond, Kejriwal refused to do so-Pinky Anand,Gadkari's lawyer pic.twitter.com/hedR9xAIhU
— ANI (@ANI_news) May 21, 2014 ಏನಿದು ಪ್ರಕರಣ: ಭಾರತದ ಅತ್ಯಂತ ಭ್ರಷ್ಟ ರಾಜಕಾರಣಿಗಳು ಎಂಬ ಹೆಸರಿನಲ್ಲಿ ಪಟ್ಟಿ ಬಿಡುಗಡೆ ಮಾಡಿದ್ದ ಕೇಜ್ರಿವಾಲ್ ಅವರು ನಿತಿನ್ ಗಡ್ಕರಿ ವಿರುದ್ಧ ಭೂ ಹಗರಣದ ಆರೋಪ ಹೊರೆಸಿದ್ದರು. ಅರವಿಂದ್ ಕೇಜ್ರಿವಾಲ್ ಹೇಳಿಕೆ ವಿರುದ್ಧ ನಿತ್ನ್ ಗಡ್ಕರಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟಿಗೆ ಹಾಜರಾದ ಕೇಜ್ರಿವಾಲ್ ಅವರು ನಾನು ಆಮ್ ಆದ್ಮಿಯಂತೆ ನಡೆದುಕೊಳ್ಳಬೇಕಾಗುತ್ತದೆ ಹಾಗಾಗಿ ಜಾಮೀನಿಗಾಗಿ ಬಾಂಡ್ ಸಲ್ಲಿಸುವುದಿಲ್ಲ. ಇದು ರಾಜಕೀಯ ದುರುದ್ದೇಶದ ಕೇಸ್ ಎಂದರು. ಈ ಸಂದರ್ಭದಲ್ಲಿ ನಿತಿನ್ ಗಡ್ಕರಿ ಪರ ವಕೀಲೆ ಪಿಂಕಿ ಆನಂದ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಬೇಕೆಂದು ಕೋರಿದರು. ಅದರಂತೆ, ಅರವಿಂದ್ ಅವರಿಗೆ ತಿಹಾರ್ ಜೈಲಿಗೆ ಕಳಿಸಲಾಗಿದೆ.












Click it and Unblock the Notifications