ಅಗ್ನಿಪಥ್ ಯೋಜನೆಗೆ ಪಂಜಾಬಿನಲ್ಲಿ ಪಕ್ಷದ ಸಂಪೂರ್ಣ ಬೆಂಬಲವಿದೆ ; ಅರವಿಂದ್ ಕೇಜ್ರಿವಾಲ್
ನವದೆಹಲಿ, ಸೆ.14: ಅಗ್ನಿವೀರ್‌ಗಳ ನೇಮಕಾತಿ ಸಮಯದಲ್ಲಿ ಪಂಜಾಬ್‌ನ ಆಮ್ ಆದ್ಮಿ ಸರ್ಕಾರವು ಅಗ್ನಿಪಥ್ ಯೋಜನೆಯನ್ನು "ಸಂಪೂರ್ಣವಾಗಿ ಬೆಂಬಲಿಸುತ್ತದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.
ಪಂಜಾಬ್ ಸರ್ಕಾರವು ಅಗ್ನಿಪಥ್ ಯೋಜನೆಯ ನೇಮಕಾತಿ ಅಭಿಯಾನಗಳಿಗೆ ಬೆಂಬಲ ನೀಡುತ್ತಿಲ್ಲ ಎಂಬ ವರದಿಗಳ ನಂತರ ಅರವಿಂದ್ ಕೇಜ್ರಿವಾಲ್ ಅವರ ಸ್ಪಷ್ಟನೆ ಬಂದಿದೆ.
ಆಮ್ ಆದ್ಮಿ ಪಕ್ಷ (ಎಎಪಿ) ಈ ಹಿಂದೆ ಅಗ್ನಿಪಥ್ ಯೋಜನೆಯನ್ನು ಟೀಕಿಸಿತ್ತು. ರಕ್ಷಣಾ ಉದ್ಯೋಗ ಆಕಾಂಕ್ಷಿಗಳಿಗೆ ಕೇವಲ ನಾಲ್ಕು ವರ್ಷಗಳಲ್ಲದೇ ತಮ್ಮ ಜೀವನದುದ್ದಕ್ಕೂ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.

ಕೇಂದ್ರವು ಯೋಜನೆ ಜಾರಿಗೊಳಿಸಿರುವುದರಿಂದ ಬೆಂಬಲಿಸುತ್ತೇವೆ
"ನಮಗೆ ಅಗ್ನಿಪಥ್ ಯೋಜನೆಯಲ್ಲಿ ಕೇಂದ್ರದೊಂದಿಗೆ ಭಿನ್ನಾಭಿಪ್ರಾಯಗಳಿವೆ. ಆದರೆ, ಕೇಂದ್ರವು ಅದನ್ನು ಜಾರಿಗೆ ತಂದಿರುವುದರಿಂದ ನಾವು ಅದನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ನಾವು ಯೋಜನೆ ಮತ್ತು ಸೇನೆಯೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ" ಎಂದು ಕೇಜ್ರಿವಾಲ್ ಅವರು ತಮ್ಮ ಮೊದಲ ಆಫ್‌ಲೈನ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದರು. ಫೆಬ್ರವರಿ 2020 ರಲ್ಲಿ ದೆಹಲಿಯಲ್ಲಿ ಎಎಪಿ ಸರ್ಕಾರ ರಚನೆಯಾದ ಬಳಿಕ ಮೊದಲ ಬಾರಿಗೆ ಆಫ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಬಳಿಕ, ಅವರ ಪಂಜಾಬ್ ಸಹವರ್ತಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಅಗ್ನಿಪಥ್ ಯೋಜನೆಯಲ್ಲಿ "ಸಂಪೂರ್ಣ ಬೆಂಬಲ" ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪಂಜಾಬ್‌ನಿಂದ ಗರಿಷ್ಠ ಅಭ್ಯರ್ಥಿಗಳ ಭರ್ತಿಗೆ ಪ್ರಯತ್ನ!
"ಪಂಜಾಬ್‌ನಲ್ಲಿ ಅಗ್ನಿವೀರ್‌ಗಳ ನೇಮಕಾತಿಗಾಗಿ ಸೇನಾ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ ನೀಡುವಂತೆ ಎಲ್ಲಾ ಡೆಪ್ಯೂಟಿ ಕಮಿಷನರ್‌ಗಳಿಗೆ ನಿರ್ದೇಶಿಸಲಾಗಿದೆ. ಯಾವುದೇ ಸಡಿಲಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಪಂಜಾಬ್ ರಾಜ್ಯದಿಂದ ಸೇನೆಯಲ್ಲಿ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು" ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಒಪ್ಪಂದದ ಆಧಾರದಲ್ಲಿ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಆಯ್ಕೆ
ಈ ವರ್ಷದ ಜೂನ್‌ನಲ್ಲಿ ಪ್ರಾರಂಭಿಸಲಾದ ಅಗ್ನಿಪಥ್ ಯೋಜನೆಯು ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೈನಿಕರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತದೆ.
ಮೊದಲ ವರ್ಷದಲ್ಲಿ 30,000 ರೂಪಾಯಿ ಮತ್ತು ನಾಲ್ಕನೇ ವರ್ಷದಲ್ಲಿ 40,000 ರೂಪಾಯಿ ಮಾಸಿಕ ವೇತನ ಪಡೆಯುವ ಅಗ್ನಿವೀರರು ನಾಲ್ಕನೇ ಒಂದು ಭಾಗದಷ್ಟು ಜನರು ಸಶಸ್ತ್ರ ಪಡೆಗಳಲ್ಲಿ ಕಾಯಂ ಆಯೋಗಕ್ಕೆ ಆಯ್ಕೆಯಾಗುತ್ತಾರೆ. ನಾಲ್ಕು ವರ್ಷಗಳ ಒಪ್ಪಂದದ ಕೊನೆಯಲ್ಲಿ, ಇವರಿಗೆ 11 ಲಕ್ಷದ ಪಿಂಚಿಣಿ ನೀಡಲಾಗುತ್ತದೆ. ಇದು ಸ್ವಯಂ ಉದ್ಯೋಗದ ಮಾರ್ಗಗಳನ್ನು ಸೃಷ್ಟಿಸಲು ಅಥವಾ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ. ಕೇಂದ್ರೀಯ ಅರೆಸೇನಾ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್ ಅಗ್ನಿವೀರರಿಗೆ 10% ಉದ್ಯೋಗಾವಕಾಶಗಳನ್ನು ಭರವಸೆ ನೀಡಿವೆ.

ಅಗ್ನಿಪಥ್; ರಹಸ್ಯ ಫೈಲ್ ಎಂದ ರಕ್ಷಣಾ ಸಚಿವಾಲಯ
ಅಗ್ನಿಪಥ್ ಯೋಜನೆ ಘೋಷಣೆಯಾಗುತ್ತಿದ್ದಂತೆ ದೇಶದಲ್ಲಿ ಭಾರಿ ಪ್ರತಿಭಟನೆಗೆ ಸಾಕ್ಷಿಯಾಯಿತು. ಯುವಜನರಿಗೆ ಕಾಯಂ ಉದ್ಯೋಗ ನೀಡುವುದನ್ನು ಬಿಟ್ಟು ಒಪ್ಪಂದದ ಆಧಾಋದಲ್ಲಿ ಉದ್ದಯೋಗ ನೀಡುವುದು ಮತ್ತು ಸೇನೆಗೆ ನಾಲ್ಕು ವರ್ಷಗಳ ಅಲ್ಪಾವಧಿಯಲ್ಲಿ ಕೆಲಸ ನೀಡುವುದನ್ನು ವಿರೋಧಿಸಲಾಯಿತು.
ಇನ್ನು, ಪುಣೆ ಮೂಲದ ಆರ್‌ಟಿಐ ಕಾರ್ಯಕರ್ತ ವಿಹಾರ್ ದುರ್ವೆ ಅವರು ಸೇನಾ ನೇಮಕಾತಿಯ ಅಗ್ನಿಪಥ್ ಯೋಜನೆಯ ವಿವರಗಳನ್ನು ಕೇಳಿ ಸಲ್ಲಿಸಿರುವ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ರಕ್ಷಣಾ ಸಚಿವಾಲಯವು ನಿರಾಕರಿಸಿದೆ. ಈ ಯೋಜನೆಯ ಫೈಲ್ ಅನ್ನು "ರಹಸ್ಯ" ಎಂದು ಗುರುತಿಸಲಾಗಿದೆ ಎಂದು ಸಚಿವಾಲಯದ ಪತ್ರ ಮಾಹಿತಿ ನೀಡಿದೆ. ಅಗ್ನಿಪಥ್ ಸ್ಕೀಮ್ ಅನುಮೋದನೆಯ ಫೈಲ್ ಅನ್ನು SECRET (ರಹಸ್ಯ) ಎಂದು ವರ್ಗೀಕರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications