ಉಚಿತ ನೀರು ಪೂರೈಕೆಗೆ ಅಸ್ತು ಅಂದ ಕೇಜ್ರಿವಾಲ್

ತಮ್ಮ ಅನಾರೋಗ್ಯದ ನಡುವೆಯೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ತಮ್ಮ ನಿವಾಸದಲ್ಲಿ ದೆಹಲಿ ಜಲ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ. [ಆಮ್ ಆದ್ಮಿ ಮುಖ್ಯಮಂತ್ರಿಯಾದ ದಿನ]
ಜನವರಿ 1ರಿಂದ ಮಾರ್ಚ್ 31ರವರೆಗೆ ಪ್ರತಿ ಕುಟುಂಬಕ್ಕೆ ಪ್ರತಿ ದಿನ 666 ಲೀಟರ್ ಉಚಿತ ನೀರು ಪೂರೈಕೆ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಅಧಿಕಾರಕ್ಕೆ ಬಂದ ಮೂರು ದಿನಗಳಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಆಮ್ ಆದ್ಮಿ ಸರ್ಕಾರ ಈಡೇರಿಸಿದೆ.
ಸಿಎಂ ಅರವಿಂದ್ ಕೇಜ್ರಿವಾಲ್ ತೆಗೆದುಕೊಂಡ ತೀರ್ಮಾನದಂತೆ ಮುಂದಿನ ಮೂರು ತಿಂಗಳವರಗೆ ಪ್ರತಿ ದಿನಕ್ಕೆ 666 ಲೀಟರ್ ನೀರು ಉಚಿತವಾಗಿ ನೀಡಲಾಗುತ್ತದೆ. 666 ಲೀಟರ್‌ಗಿಂತ ಹೆಚ್ಚು ನೀರು ಬಳಸಿದರೆ, ಅದಕ್ಕೆ ಹಣ ನೀಡ ಬೇಕಾಗುತ್ತದೆ ಎಂದು ದೆಹಲಿ ಜಲ ಮಂಡಳಿ ಸಿಇಒ ವಿಜಯ್ ಕುಮಾರ್ ಅವರು ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ದಿನಕ್ಕೆ 700 ಲೀಟರ್ ನೀರು ಮತ್ತು ಶೇ 50ರಷ್ಟು ರಿಯಾಯಿತಿ ದರದಲ್ಲಿ ವಿದ್ಯುತ್ ನೀಡುವುದು, ಜನ ಲೋಕಪಾಲ ಮಸೂದೆ ಜಾರಿಗೆ ತರುವುದು ಆಮ್ ಪಕ್ಷ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಯಾಗಿತ್ತು. ಅದರಲ್ಲಿ ಒಂದು ಭರವಸೆಯನ್ನು ಈಡೇರಿಸಿದ್ದು, ವಿದ್ಯುತ್ ದರ ಕಡಿತಗೊಳಿಸುವ ಕುರಿತು ಶೀಘ್ರದಲ್ಲೇ ಆದೇಶ ಹೊರಡಿಸುವ ಸಾಧ್ಯತೆ ಇದೆ.











Click it and Unblock the Notifications